ಉಡುಪಿ

ಶ್ರೀಕೃಷ್ಣನ ನಾಡಿನಲ್ಲಿ ಗೆಲ್ಲಲು ಕಾಂಗ್ರೆಸ್-ಬಿಜೆಪಿ ತಂತ್ರ-ಪ್ರತಿತಂತ್ರ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಶತಾಯಗತಾಯ ಕ್ಷೇತ್ರವನ್ನು ಉಳಿಸಿಕೊಳ್ಳಲೇ ಬೇಕೆಂದು ಕಾಂಗ್ರೆಸ್ ಅಭ್ಯರ್ಥಿ, ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಪಣತೊಟ್ಟಿದ್ದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿ ಇತರ ರಾಷ್ಟ್ರೀಯ ನಾಯಕರು ಇಲ್ಲಿ ಗೆಲ್ಲಲೇಬೇಕೆಂದು ರಣಕಹಳೆ ಮೊಳಗಿಸಿದ್ದಾರೆ.

ಬಿಜೆಪಿ ಭದ್ರಕೋಟೆಯಾದ ಉಡುಪಿಯನ್ನು ಕಾಂಗ್ರೆಸ್ ಮಣಿಸಿದ್ದು ವಿಶೇಷ. ಮೊದಲ ಬಾರಿ ಶಾಸಕರಾಗಿ, ಸಚಿವರೂ ಆದ ಪ್ರಮೋದ್ ಮಧ್ವರಾಜ್ ಇದೀಗ ಕ್ಷೇತ್ರದಲ್ಲಿ, ಪಕ್ಷದಲ್ಲಿ ಸಾಕಷ್ಟು ಪ್ರಭಾವಿ. ಕಳೆದ ಚುನಾವಣೆಯಲ್ಲಿ 40 ಸಾವಿರ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಪ್ರಮೋದ್ ಗಮನ ಸೆಳೆದಿದ್ದರು.

ಇವರನ್ನು ಮಣಿಸುವುದಕ್ಕಾಗಿಯೇ ಬಿಜೆಪಿ ವಿಶೇಷ ತಂತ್ರಗಳನ್ನು ಹೂಡಿದೆ. ಈ ಸಲುವಾಗಿಯೇ ಅಮಿತ್ ಷಾ, ರಾಜನಾಥ್ ಸಿಂಗ್ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ (ಮೇ 1) ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ.

ಪ್ರಮೋದ್​ರನ್ನು ಕಟ್ಟಿಹಾಕಲು ಲೆಕ್ಕಾಚಾರ ನಡೆಸಿದ ಬಿಜೆಪಿ, ರಘುಪತಿ ಭಟ್ ಅವರನ್ನೇ ಈ ಬಾರಿಯೂ ಕಣಕ್ಕಿಳಿಸಿದೆ. ಕಳೆದ ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಫಲಿತಾಂಶ ಕಳಪೆಯಾಗಿರುವುದು ಪ್ರಮೋದ್​ಗೆ ಹಿನ್ನಡೆಯಾಗಿದೆ. ಜತೆಗೆ ಪಕ್ಷದಲ್ಲೇ ಕೆಲವರಿಗೆ ಅಸಮಾಧಾನ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಮೀನುಗಾರಿಕೆ ಸಂಘಟನೆಗಳ ಒಡಕೂ ತಲೆನೋವಾಗಿದೆ. ಈ ನಡುವೆ, ಪ್ರಮೋದ್ ಬಿಜೆಪಿ ಸೇರುತ್ತಾರೆಂಬ ಸುದ್ದಿ ಬಲವಾಗಿತ್ತು. ನಾಮಪತ್ರ ಸಲ್ಲಿಕೆಯಾದ ಬಳಿಕವಷ್ಟೇ ಗೊಂದಲಗಳಿಗೆ ತೆರೆಬಿದ್ದಿದೆ.

ರಘುಪತಿ ಭಟ್ ಆಯ್ಕೆ ಲೆಕ್ಕಾಚಾರ

ರಘುಪತಿ ಭಟ್ ಸಕ್ರಿಯ, ಉತ್ಸಾಹಿ ರಾಜಕಾರಣಿ ಹಾಗೂ ಜನರಿಗೆ ಚಿರಪರಿಚಿತರು. ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಪ್ರಬಲ ನಾಯಕ, ಶಾಸಕರಾಗಿ ಹೆಚ್ಚಿನ ಅನುಭವ, ಜನಸಾಮಾನ್ಯರ ಹೋರಾಟಗಳ ನೇತೃತ್ವ ವಹಿಸಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ರಘುಪತಿ ಭಟ್, ಪ್ರಮೋದ್ ಶಾಸಕರಾಗಿ ಮಂತ್ರಿಯಾದ ಬಳಿಕ ರಾಜಕೀಯ ವಲಯದಲ್ಲಿ ಕೆಲಕಾಲ ಸುಮ್ಮನಿದ್ದರು. ಈ ನಡುವೆ, ಉಡುಪಿ ಕ್ಷೇತ್ರಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿತ್ತು. ಬಿಜೆಪಿ ಲೆಕ್ಕಾಚಾರ ಪ್ರಕಾರ ರಘುಪತಿ ಭಟ್ ಪ್ರಮೋದ್​ಗೆ ಸಮರ್ಥ ಪ್ರತಿಸ್ಪರ್ಧಿ. 2013ರಲ್ಲಿ ಭಟ್ ಕಣದಿಂದ ಹಿಂದೆ ಸರಿದಿದ್ದರು. ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ರಘುಪತಿ ಭಟ್ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಡಿ ಪ್ರಕರಣ, ಶಾಸಕರಾಗಿದ್ದ ಅವಧಿಯಲ್ಲಿ ಸೇಂಟ್ ಮೇರಿಸ್ ಐಲ್ಯಾಂಡ್​ನಲ್ಲಿ ರೇವ್ ಪಾರ್ಟಿ, ಪತ್ನಿ ಪದ್ಮಪ್ರಿಯಾ ನಿಗೂಢ ಸಾವು ಭಟ್ಟರ ರಾಜಕೀಯ ವರ್ಚಸ್ಸಿನ ಮೈನಸ್ ಪಾಯಿಂಟ್.

ಸಮಸ್ಯೆ ಆಲಿಸುವ ಶಾಸಕ

ಸಚಿವರಾಗಿದ್ದರೂ ಪ್ರಮೋದ್ ಮಧ್ವರಾಜ್ ವಾರಕ್ಕೊಮ್ಮೆ ವಾರ್ಡ್ ಸಭೆ ನಡೆಸಿ ಅಧಿಕಾರಿಗಳು ಜನರ ಬಳಿಗೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲ ಪ್ರಮುಖ ಇಲಾಖೆ ಅಧಿಕಾರಿಗಳೊಂದಿಗೆ ವಾರ್ಡ್ ಸಭೆ ನಡೆಸಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುತ್ತಿದ್ದರು.

ಏನೇನಾಗಿದೆ, ಏನಾಗಿಲ್ಲ?

ಐದು ವರ್ಷಗಳಿಂದ ಕ್ಷೇತ್ರದಲ್ಲಿ ಪ್ರಮುಖವಾಗಿ ಉಡುಪಿ ನಗರಕ್ಕೆ ಸಂಬಂಧಪಟ್ಟಂತೆ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆ ರೂಪಿಸಿಲ್ಲ, ಕೊನೇ ಹಂತದಲ್ಲಿ ವರಾಹಿ ಯೋಜನೆ ಜಾರಿಗೆ ಶ್ರಮಿಸಿದ್ದಾರೆ. ಮರಳುಗಾರಿಕೆ ಸಮಸ್ಯೆಯನ್ನು ಸೂಕ್ತ ರೀತಿ ನಿರ್ವಹಿಸಲು ಸಾಧ್ಯವಾಗಿಲ್ಲ. ಕ್ಷೇತ್ರಕ್ಕೆ ಅತಿ ಹೆಚ್ಚು ಕ್ರೀಡಾ ಕಿಟ್​ಗಳನ್ನು ಒದಗಿಸಿದ್ದಾರೆ. ಗ್ರಾಮೀಣ ರಸ್ತೆ, ಸೇತುವೆಗಳ, ಪ್ರವಾಸೋದ್ಯಮ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿ, ಉಡುಪಿ ನಗರ, ಮಣಿಪಾಲ ಪ್ರದೇಶಗಳಲ್ಲಿ ವ್ಯವಸ್ಥಿತ ಚರಂಡಿ ಸಮಸ್ಯೆ ಪರಿಹಾರಕ್ಕೆ ಅನುದಾನ, ಸಮೀಕ್ಷೆ ಹಂತದಲ್ಲೇ ಬಾಕಿ, ಮಲ್ಪೆಯನ್ನು ಆಕರ್ಷಕ ಪ್ರವಾಸಿತಾಣವಾಗಿಸುವಲ್ಲಿ ಶ್ರಮ.

ದಳಕ್ಕೆ ಬಲವಿಲ್ಲ

2008ರ ಚುನಾವಣೆಯಲ್ಲಿ ಉಡುಪಿಯಿಂದ ಜೆಡಿಎಸ್ ಸ್ಪರ್ಧಿಸಿರಲಿಲ್ಲ. 2013ರಲ್ಲಿ ಸ್ಪರ್ಧಿಸಿದ್ದ ಬಾರ್ಕರು ಸತೀಶ್ ಪೂಜಾರಿ 1,013 ಮತಗಳೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹಾಗಾಗಿ ಉಡುಪಿ ಕೃಷ್ಣನ ಊರಲ್ಲಿ ‘ತೆನೆ ಹೊತ್ತ ಮಹಿಳೆ’ ಪ್ರಭಾವ ಇಲ್ಲ.

ಜಾತಿ ಲೆಕ್ಕಾಚಾರ

ಉಡುಪಿ ಕ್ಷೇತ್ರದಲ್ಲಿ ಮೊಗವೀರ ಪ್ರಬಲ ಸಮುದಾಯವಾಗಿದ್ದು, ಪ್ರಥಮ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಬಿಲ್ಲವ, ನಂತರ ಸ್ಥಾನದಲ್ಲಿ ಬಂಟ್ಸ್ ಮತ್ತು ಬ್ರಾಹ್ಮಣ ಸಮುದಾಯಗಳಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕ್ರೖೆಸ್ತ, ಇತರ ಸಮುದಾಯಗಳು ನಿರ್ಣಾಯಕ ಪಾತ್ರವಹಿಸುತ್ತವೆ.

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

21 hours ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

21 hours ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

22 hours ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

22 hours ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

23 hours ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

24 hours ago