ಸಮುದ್ರಗಳ ಅಲೆಗಳಂತೆ ಉಕ್ಕಿಬಂದ ಜನಸಾಗರ, ಉಡುಪಿ ಮೀನುಗಾರರ ಪ್ರತಿಭಟನೆ
ಉಡುಪಿ, ಜ.6: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ಬೋಟ್ ಹಾಗೂ ಏಳು ಮೀನುಗಾರರ ಶೀಘ್ರ ಪತ್ತೆಗೆ ಆಗ್ರಹಿಸಿ ಮೀನುಗಾರರ ಬೃಹತ್ ಧರಣಿ ಮೆರವಣಿಗೆ ಇಂದು ಬೆಳಗ್ಗೆ ಮಲ್ಪೆಯಿಂದ ಆರಂಭಗೊಂಡಿದೆ.
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಮಲ್ಪೆ ಬಂದರ್‌ನಿಂದ ಕರಾವಳಿ ಬೈಪಾಸ್ ವರೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಯ 15 ಸಾವಿರಕ್ಕೂ ಅಧಿಕ ಮೀನುಗಾರರು ಭಾಗವಹಿಸಿದ್ದಾರೆ. ಧರಣಿಯ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ.
ಮೆರವಣಿಗೆಯು ಅಂಬಲಪಾಡಿ ಜಂಕ್ಷನ್ ತಲುಪಿ, ಅಲ್ಲಿ ಧರಣಿನಿರತರು ರಸ್ತೆ ತಡೆ ನಡೆಸಲಿದ್ದಾರೆ. ಬಳಿಕ ಪ್ರತಿಭಟನಾ ಸಭೆ ನಡೆಯಲಿದೆ.
ಈ ನಡುವೆ ಮೀನುಗಾರರ ಬೃಹತ್ ಮೆರವಣಿಗೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಬಲಪಾಡಿಯಿಂದ ಕಿನ್ನಿಮೂಲ್ಕಿಯ ವರೆಗೆ ಸುಮಾರು ನಾಲ್ಕು ಕಿ.ಮೀ. ರಸ್ತೆ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಶರಬತ್, ನೀರು ಪೂರೈಕೆ
ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಆದಿಉಡುಪಿಯ ಮಸೀದಿಯ ವತಿಯಿಂದ ಶರಬತ್ತು ವ್ಯವಸ್ಥೆ ಕಲ್ಪಿಸಲಾಗಿದೆ. ಅದೇರೀತಿ ಮಲ್ಪೆ ಮಸೀದಿಯ ವತಿಯಿಂದ ಮತ್ತು ಕಲ್ಮಾಡಿ ಚರ್ಚ್ ವತಿಯಿಂದ ಮೆರವಣಿಗೆಯಲ್ಲಿ ಸಾಗುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಸಿ. ಕುಂದರ್, ಮುಖಂಡರಾದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಲಾಲಾಜಿ ಆರ್ ಮೆಂಡನ್, ಯಶ್ಪಾಲ್ ಸುವರ್ಣ ಮತ್ತಿತರರು ಧರಣಿಗೆ ನೇತೃತ್ವ ವಹಿಸಿದ್ದಾರೆ.
https://m.facebook.com/story.php?story_fbid=1643445759134736&id=193132874519477
