ಸಮ್ಮಿಶ್ರ ಸರ್ಕಾರದ ಏಕೈಕ ಮಹಿಳಾ ಸಚಿವೆ ಬಿಲ್ಲವ ಜಯಮಾಲಾಗೆ ಮಂತ್ರಿ ಸ್ಥಾನ : ಕರಾವಳಿಯಲ್ಲಿ ಹರ್ಷ
ಮಂಗಳೂರು : ರಾಜಕೀಯದಲ್ಲಿ ಕರಾವಳಿಯ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ಇಂದು ನಿನ್ನೆಯದ್ದಲ್ಲ. ಆದರೆ ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಸಮ್ಮಿಶ್ರ ಸರಕಾರದಲ್ಲಿ ಬಿಲ್ಲವ ಸಮುದಾಯದ ಮಹಿಳೆಯೊಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದು ಕರಾವಳಿಯ ಅದರಲ್ಲೂ ಮಂಗಳೂರಿನಲ್ಲಿರುವ ಬಿಲ್ಲವ ಸಮಾಜಕ್ಕೆ ಹರ್ಷ ತಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ, ಪ್ರಸ್ತುತ ಚಲನಚಿತ್ರ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಜಯಮಾಲಾಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು ಅವರು ಬುಧವಾರದಂದು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಅವರಿಗೆ ವಹಿಸುವ ನಿರೀಕ್ಷೆಯಿದೆ.
ಮಂಗಳೂರು ತಾಲೂಕಿನ ಪಣಂಬೂರಿನಲ್ಲಿ ಹುಟ್ಟಿದ ಜಯಮಾಲಾ ನಾಲ್ಕು ವರ್ಷ ಇಲ್ಲಿದ್ದರು. 1963ರಲ್ಲಿ ನವಮಂಗಳೂರು ಬಂದರು ನಿರ್ಮಾಣಕ್ಕೆ ಭೂಸ್ವಾಧೀನಗೊಂಡಾಗ ಇವರ ಕುಟುಂಬ ಜಾಗ ತೊರೆದು ಚಿಕ್ಕಮಗಳೂರಿಗೆ ಶಿಫ್ಟ್ ಆಗಿತ್ತು. ತಂದೆ ಓಮಯ್ಯ ಕೃಷಿಕರು, ತಾಯಿ ಕಮಲಮ್ಮ ಗೃಹಿಣಿ. ಆರು ಮಂದಿ ಸಹೋದರಿಯರು, ಓರ್ವ ಸಹೋದರ ಇದ್ದಾರೆ.
ಬಿಲ್ಲವ ಸಂಘಟನೆಗಳಲ್ಲಿ ಇಂದಿಗೂ ಸಕ್ರಿಯವಾಗಿ ಗುರುತಿಸಿಕೊಂಡಿರುವ ಜಯಮಾಲಾ ಕರಾವಳಿಯಲ್ಲಿ ನಡೆಯುವ ಬಿಲ್ಲವ ಸಂಘಟನೆಗಳ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾರೆ. ಬಡವರ್ಗದವರ ಬಗ್ಗೆ ತುಡಿತ ಹೊಂದಿರುವ ಇವರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮ ಕೈಲಾದ ಸಹಾಯವನ್ನೂ ಮಾಡುತ್ತಾರೆ ಎನ್ನುತ್ತಾರೆ ಕರಾವಳಿಯ ಬಿಲ್ಲವ ಸಮುದಾಯದ ಮುಖಂಡರು.
ಬಿಲ್ಲವ ಸಮುದಾಯದ ಹೆಣ್ಣುಮಗಳಿಗೆ ಮಂತ್ರಿಗಿರಿ ಸಿಕ್ಕಿರುವುದು ಇದೀಗ ಕರಾವಳಿಯಲ್ಲಿ ಸಂಭ್ರಮ ಮೂಡಿಸಿದೆ. ನಮ್ಮ ಸಮಾಜಕ್ಕೆ ಸ್ಥಾನಮಾನ ಸಿಗಬೇಕೆಂದು ಇದ್ದ ಕೂಗು ಕೊನೆಗೂ ರಾಜ್ಯ ಸರಕಾರವನ್ನು ಮುಟ್ಟಿದೆ ಎಂದು ಇಲ್ಲಿನ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.
