ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ -Vishwanews24
ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ -Vishwanews24
ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಆಚರಣೆ ಹಾಗೂ ಜಂಬೂ ಸವಾರಿ ರೂಪುರೇಷೆ ಬಗ್ಗೆ ಇಂದು ಬೆಂಗಳೂರಿನಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಿತು. ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈಸೂರು ದಸರಾ ಆಚರಣೆ ಕುರಿತಾಗಿ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮಾರಕ ಕೊರೋನಾ ವೈರಸ್ ಹರಡುವ ಭೀತಿ ಇರುವುದರಿಂದ ಈ ಬಾರಿ ಮೈಸೂರು ದಸರಾ ಆಚರಣೆಯನ್ನು ಸರಳವಾಗಿಯೇ ಆಚರಿಸಲು ತೀರ್ಮಾನಿಸಲಾಗಿದೆ.
ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಸಚಿವ ಸಿ.ಟಿ. ರವಿ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ. ದಸರಾದಲ್ಲಿ ಜಂಬೂ ಸವಾರಿ ಇರಲ್ಲ, ಕೇವಲ ಅರಮನೆ ಒಳಗಡೆ ಮಾತ್ರ ಜಂಬೂ ಸವಾರಿ ಇರಲಿದೆ ಎಂದರು.
ಇನ್ನು ಈ ಬಾರಿ ಮಕ್ಕಳ ದಸರಾ, ಮಹಿಳಾ ದಸರಾ, ಯುವದಸರಾ, ಕುಸ್ತಿ ಪಂದ್ಯಾವಳಿ, ಆಹಾರ ಮೇಳ , ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಯುವ ದಸರಾ, ಮಹಿಳಾ ದಸರಾ, ಚಿಣ್ಣರ ದಸರಾ, ರೈತ ದಸರಾ, ಪಂಜಿನ ಕವಾಯಿತು ಸೇರಿದಂತೆ ಜನಸಂದಣಿ ಕಾರ್ಯಕ್ರಮಗಳು ಈ ಬಾರಿಯ ಮೈಸೂರು ದಸರಾದಲ್ಲಿ ಇರುವುದಿಲ್ಲ.
ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಸಹ ಕನಿಷ್ಟ 5ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿ, 5-6 ಆನೆಗಳನ್ನು ಮಾತ್ರ ಬಳಸಿ, ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸುವುದು. ಮೈಸೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೋವಿಡ್ ಗಾಗಿ ಶ್ರಮಿಸಿರುವ ಕರೊನಾ ಯೋಧರಾದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೊಲೀಸ್ ಅವರಿಂದ ನೆರವೇರಿಸುವುದು ಎಂದು ತೀರ್ಮಾನಿಸಲಾಯಿತು.
