ಸಾಧ್ಯವಾದರೆ ಬಹುಮತ ಸಾಬೀತುಪಡಿಸಿ ,ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ ; ಶೋಭಾಗೆ ಸಿದ್ದರಾಮಯ್ಯ ಸವಾಲ್ -Vishwanews24​

Featured, ರಾಜ್ಯ ನ್ಯೂಸ್

ಬೆಂಗಳೂರು :ನಿಮಗೆ ಸಾಧ್ಯವಾದರೆ ಬಿಜೆಪಿಯ ಬಹುಮತ ಸಾಬೀತುಪಡಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಸವಾಲೊಂದನ್ನು ಹಾಕಿದ್ದು, ಕೇವಲ 105 ಶಾಸಕರಿಂದ ಸರ್ಕಾರ ರಚಿಸಬಹುದು ಎನ್ನುವ ವಿಶ್ವಾಸ ನಿಮಗಿದ್ದರೆ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿ, ಅವರು ಒಪ್ಪಿದರೆ ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ 113 ಶಾಸಕರ ಬೆಂಬಲವಿದ್ದರೆ ಯಾರೂ ಬೇಕಾದರೂ ಸರ್ಕಾರ ರಚನೆ ಮಾಡಬಹುದು. ಒಂದು ವೇಳೆ ರಾಜ್ಯಪಾಲರು ನಿಮ್ಮ ಹಕ್ಕು ಮಂಡನೆಯನ್ನು ಒಪ್ಪಿಕೊಂಡರೆ ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ. 105 ಕ್ಕಿಂತ 113 ದೊಡ್ಡದು ಎಂಬುದು ನನ್ನ ಅನಿಸಿಕೆ ಎಂದು ಟಾಂಗ್ ನೀಡಿದ್ದಾರೆ.

ಶಾಸಕ ಆನಂದ್​ ಸಿಂಗ್ ಮತ್ತು ರಮೇಶ್​ ಜಾರಕಿಹೊಳಿ ರಾಜೀನಾಮೆ ವಿಚಾರ ಮೈತ್ರಿ ಸರ್ಕಾರದಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯ, ಈ ರಾಜೀನಾಮೆಯ ನಾಟಕದ ಸೂತ್ರಧಾರರು ರಾಜ್ಯದ ಬಿಜೆಪಿ ನಾಯಕರು. ಸರ್ಕಾರವನ್ನು ಮುನ್ನಡೆಸಲು ಜನರು ಅವರಿಗೆ ಅವಕಾಶ ಕೊಡಲಿಲ್ಲ. ಹೀಗಾಗಿ, ಅವರು ಹಿಂಬಾಗಿಲ ಮೂಲಕ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಲ್ಪವಾದರೂ ಸ್ವಾಭಿಮಾನವಿದ್ದರೆ ಕೊಳಕು ರಾಜಕಾರಣ ಮಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ಸಂವಿಧಾನಬದ್ಧವಾಗಿ ನಡೆದುಕೊಳ್ಳಲು ಸೂಚಿಸಲಿ ಎಂದು ಆಕ್ರೋಶ ಹೊರಹಾಕಿದ್ದರು.