ಸಿಎಂ ಅಕ್ಕಿಯನ್ನು ತಮ್ಮ ಹುಂಡಿ ಹಣದಿಂದೇನೂ ನೀಡುತ್ತಿಲ್ಲ; ಜನರು ನೀಡಿರುವ ತೆರಿಗೆ ಹಣದಲ್ಲೇ ಅವರು ನೀಡುತ್ತಿದ್ದಾರೆ… ಎಚ್‌.ಡಿ.ಕುಮಾರಸ್ವಾಮಿ

Featured, ಜಿಲ್ಲೆ

ಪಾವಗಡ/ಮೈಸೂರು: ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯಿಂದ ನೀಡುತ್ತಿರುವ ಅಕ್ಕಿಯನ್ನು ತಮ್ಮ ಹುಂಡಿಯಿಂದ ತಂದೇನೂ ಕೊಡುತ್ತಿಲ್ಲ. ಜನರು ನೀಡಿರುವ ತೆರಿಗೆ ಹಣದಲ್ಲೇ ಅವರು ನೀಡುತ್ತಿದ್ದಾರೆ. ಒಂದು ಕಡೆ ಅಕ್ಕಿ ನೀಡಿ ಇನ್ನೊಂದು ಕಡೆ ಮದ್ಯದ ದರ ಹೆಚ್ಚಿಗೆ ಮಾಡಿ ಆ ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ದೂರಿದರು.

ಸಿರಾ ನಗರದ ಅಮರಾಪುರ ರಸ್ತೆಯ ಪ್ರೆಸಿಡೆನ್ಸಿ ಶಾಲೆಯ ಪಕ್ಕದ ಬೃಹತ್‌ ಮೈದಾನದಲ್ಲಿ ಜೆಡಿಎಸ್‌ ಪಕ್ಷ ದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಕಾಸ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ”ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿಯಾಗುವುದಿಲ್ಲ ಬದಲಾಗಿ ರಾಜ್ಯದ ಸುಮಾರು 6.50 ಕೋಟಿ ಜನರೂ ಸಹ ಮುಖ್ಯಮಂತ್ರಿಗಳೇ. ನೀವೆ ನಿಮ್ಮ ಮಾರ್ಗದರ್ಶನದಲ್ಲಿ ನಾನು ಆಡಳಿತ ಮಾಡುತ್ತೇನೆ,” ಎಂದು ಹೇಳಿದರು.

ಒಕ್ಕಲಿಗ ನಾಯಕರ ಖರೀದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ನಾಯಕರನ್ನು ದುಡ್ಡು ಕೊಟ್ಟು ಖರೀದಿಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ”ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಒಕ್ಕಲಿಗ ಮುಖಂಡರ ಖರೀದಿ ಆರಂಭಿಸಿದ್ದಾರೆ. ಈ ಕಾರಣಕ್ಕಾಗಿಯೇ ಬಂಡೀಪುರದ ರೆಸಾರ್ಟ್‌ನಲ್ಲಿ ಒಂದು ದಿನ ಕುಳಿತಿದ್ದರು,” ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಒಕ್ಕಲಿಗ ನಾಯಕರು ಮಂಗಳವಾರ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿರುವುದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ಒಕ್ಕಲಿಗ ನಾಯಕರು ತಾವು ಜಾತ್ಯತೀತರು ಎಂದು ಹೇಳಿಕೊಂಡಿದ್ದಾರೆ… ನಮ್ಮನ್ನು ಸೇರಿಸಿಕೊಂಡಿದ್ದಾರೆಯೋ ಇಲ್ಲವೊ ಗೊತ್ತಿಲ್ಲ,”ಎಂದು ವ್ಯಂಗ್ಯವಾಡಿದರು.

ಸಿದ್ಧುಗೆ ಕೊನೆ ಚುನಾವಣೆ: ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ. ಸಿದ್ದರಾಮಯ್ಯ ಅವರ ಅಹಂಕಾರವೇ ಅವರ ಸೋಲಿಗೆ ಕಾರಣವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.