ಸಿಎಂ ಪಂಚಕರ್ಮ ಚಿಕಿತ್ಸೆ :ಉಡುಪಿಯ ಕಾಪು ಮುಳೂರು ಸಮೀಪದ ಸಾಯಿರಾಧಾ ರೆಸಾರ್ಟಿಗೆ ಹಸಿರು ಪರದೆ -Vishwanews24

Featured, ಉಡುಪಿ

 ಕಾಪು : ಉಡುಪಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಗರದ ಸಾಯಿರಾಧಾ ರೆಸಾರ್ಟ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ರೆಸಾರ್ಟ್ ಸುತ್ತ ಹಸಿರು ಬೇಲಿ ಹಾಕುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಪಂಚಕರ್ಮ ಪ್ರಕೃತಿ ಚಿಕಿತ್ಸೆಗಾಗಿ ಹೆಚ್​.ಡಿ ಕುಮಾರಸ್ವಾಮಿ 5 ದಿನಗಳ ಕಾಲ ಉಳಿದುಕೊಂಡು ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ. ಹಾಗೇ ದೇವೇಗೌಡರಿಗೆ ಒಂದು ವಾರದ ಕೋರ್ಸ್ ನಿಗದಿಯಾಗಿದೆ. ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಸಿಎಂ ಕುಮಾರಸ್ವಾಮಿ, ರೆಸಾರ್ಟ್ ಸುತ್ತಮುತ್ತ ಮಾಧ್ಯಮಗಳನ್ನು ಬಿಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ರೆಸಾರ್ಟ್ ಆಸುಪಾಸು ಮಾಧ್ಯಮಗಳಿಗೆ ಚಿತ್ರೀಕರಣವನ್ನೂ ನಿರ್ಬಂಧಿಸಲಾಗಿದೆ. ಇದಲ್ಲದೆ ಯಾರ ಕಣ್ಣಿಗೂ ಬೀಳಬಾರದೆಂದು ರೆಸಾರ್ಟ್ ಸುತ್ತ ಹಸಿರು ಬೇಲಿ ಹಾಕುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ

ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕೆಂದು ಸತತವಾಗಿ ಓಡಾಟ ನಡೆಸಿದ್ದ ಸಿಎಂ ಮತ್ತು ಸಚಿವರು ಇದೀಗ ವಿಶ್ರಾಂತಿ ಮೂಡ್​ನಲ್ಲಿದ್ದಾರೆ. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರೂ ಮಗನೊಂದಿಗೆ ರೆಸಾರ್ಟ್​ ಸೇರಿಕೊಂಡಿದ್ದು, ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.  ಡಾ. ತನ್ಮಯ್‌ ಗೋಸ್ವಾಮಿ ನೇತೃತ್ವದ 40 ಜನರ ತಂಡ ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿಗೆ ಪ್ರಕೃತಿ ಚಿಕಿತ್ಸೆ, ಆಯುರ್ವೇದ ಪದ್ಧತಿಯ ಚಿಕಿತ್ಸೆ, ಮಸಾಜ್‌ ಸಹಿತ ಪಂಚಕರ್ಮ ಚಿಕಿತ್ಸೆ ನೀಡುತ್ತಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಮೇ 3ರವರೆಗೆ ಇಲ್ಲಿ ಚಿಕಿತ್ಸೆ ಪಡೆಯಲಿದ್ದು, ದೇವೇಗೌಡರು ಇನ್ನೂ 1 ವಾರ ಇಲ್ಲೇ ತಂಗಲಿದ್ದಾರೆ ಎಂಬ ಮಾಹಿತಿ ದೊರಕಿದೆ. ಅಲ್ಲಿಯವರೆಗೆ ಈ ರೆಸಾರ್ಟ್​ಗೆ ಸಾರ್ವಜನಿಕರ ಮತ್ತು ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ರೆಸಾರ್ಟ್ ಆವರಣ ಯಾರಿಗೂ ಕಾಣದಂತೆ ಸುತ್ತಲೂ ಹಸಿರು ಪರದೆ ಬೇಲಿ ಹಾಕುವಂತೆ ರೆಸಾರ್ಟ್ ಸಿಬ್ಬಂದಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.