ಸುಮಲತಾಗೆ ಟಿಕೆಟ್​ ನೀಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಸುಮಲತಾ, ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಚುನಾವಣೆ ಎದುರಿಸುವ ಕುರಿತು ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಿಂದ ಸುಮಲತಾಗೆ ಟಿಕೆಟ್​ ನೀಡುವ ಸಾಧ್ಯತೆಯ ಬಗ್ಗೆ ಚರ್ಚೆಯಾಗಿತ್ತು. ಆದರೀಗ ಸಿದ್ದರಾಮಯ್ಯ ಮಂಡ್ಯ ಜೆಡಿಎಸ್​ ಸಂಸದರಿರುವ ಕ್ಷೇತ್ರವಾದ್ದರಿಂದ ಸುಮಲತಾ ಅವರಿಗೆ ಟಿಕೆಟ್​ ಕೊಡುವ ಮಾತೇ ಬರುವುದಿಲ್ಲ ಎಂದಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಯಾರಿಗೆ ಟಿಕೆಟ್​ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆಯುತ್ತಿದೆ. ದೇವೇಗೌಡರ ಕುಟುಂಬದ ಕುಡಿ ನಿಖಿಲ್​ ಕುಮಾರಸ್ವಾಮಿ​ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಎಸ್​ ಸಿದ್ಧತೆ ನಡೆಸಿದೆ.

ಸೋಮವಾರ ಕಾಂಗ್ರೆಸ್​ – ಜೆಡಿಎಸ್​ ಸಮನ್ವಯ ಸಮಿತಿ ಸಭೆ ನಡೆಸಲಾಗಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಸಮನ್ವಯ ಸಮಿತಿಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮುಖ್ಯವಾಗಿ ಚರ್ಚೆಯಾದ ವಿಚಾರ ಲೋಕಸಭಾ ಟಿಕೆಟ್​ ಹಂಚಿಕೆ. ಜೆಡಿಎಸ್​ 12 ಸ್ಥಾನಗಳಿಗೆ ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್​ 9 ಸ್ಥಾನ ನೀಡಲು ಒಪ್ಪಿತ್ತು.

ಈಗ ಅದರ ಮುಂದುವರೆದ ಭಾಗವಾಗಿ ಕಾಂಗ್ರೆಸ್​ನಿಂದ ಸುಮಲತಾ ಅಂಬರೀಶ್​ಗೆ ಟಿಕೆಟ್​ ನೀಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೂಲಗಳ ಪ್ರಕಾರ ಸುಮಲತಾರಿಗೆ ಕಾಂಗ್ರೆಸ್​ನಿಂದ ಟಿಕೆಟ್​ ಸಿಕ್ಕರೆ ಅದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎನ್ನಲಾಗಿತ್ತು. ಆದರೀಗ ಸಿದ್ದರಾಮಯ್ಯ ಕೂಡ ಸುಮಲತಾ ಟಿಕೆಟ್​ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.