ಸುಲಭವಾಗಿ ಮಾಡಬಹುದಾದ ಚಿಲ್ಲಿ ಚಿಕನ್ -Vishwanews24
ನೀವು ಚಿಕನ್ ಪ್ರಿಯರೇ, ನಿಮ್ಮಿಷ್ಟದ ಚಿಲ್ಲಿ ಚಿಕನ್ ರೆಸಿಪಿಯನ್ನು ಸುಲಭದಲ್ಲಿ ಮಾಡಬಹುದಾಗಿದ್ದು, ರೆಸಿಪಿ ನೋಡಿ ಇಲ್ಲಿದೆ .ಚಿಲ್ಲಿ ಚಿಕನ್ ಕೋಳಿಮಾಂಸದ ಒಂದು ಜನಪ್ರಿಯ ಇಂಡೊ-ಚೈನೀಸ್ ಖಾದ್ಯ ಇದನ್ನು ನೀವು ಅನ್ನ, ರೊಟ್ಟಿ, ದೋಸೆ , ಚಪಾತಿಯೊಂದಿಗೆ ತಿನ್ನಬಹುದು.
ಬನ್ನಿ, ಈ ಸುಲಭ ಹಾಗೂ ರುಚಿಕಟ್ಟಾದ ಖಾದ್ಯವನ್ನು ತಯಾರಿಸುವ ಬಗೆಯನ್ನು ಈಗ ನೋಡೋಣ….
ಅಗತ್ಯವಿರುವ ಸಾಮಾಗ್ರಿಗಳು:
ಅರ್ಧ ಕೆಜಿ ಬೋನ್ಲೆಸ್ ಚಿಕನ್
ಅರ್ಧ ಕಪ್ ಜೋಳದ ಹಿಟ್ಟು
ಮೊಟ್ಟೆ- 1
ಶುಂಠಿ ಪೇಸ್ಟ್ – ½ ಚಿಕ್ಕಚಮಚ
ಬೆಳ್ಳುಳ್ಳಿ ಪೇಸ್ಟ್ – ½ ಚಿಕ್ಕ ಚಮಚ
ಎಣ್ಣೆ
ಉಪ್ಪು
ಈರುಳ್ಳಿ – ಎರಡು ಕಪ್
ಸೋಯಾ ಸಾಸ್ : ಒಂದು ದೊಡ್ಡ ಚಮಚ
ಹಸಿಮೆಣಸು : ಎರಡು :
ಶಿರ್ಕಾ: ಎರಡು ದೊಡ್ಡಚಮಚ
ನೀರು: ಅಗತ್ಯಕ್ಕೆ ತಕ್ಕಷ್ಟು
ವಿಧಾನ:
ಮೊದಲು ಮೆಕ್ಕೆಜೋಳದ ಹಿಟ್ಟು, ಶುಂಟಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೊಟ್ಟೆ ಮತ್ತು ಕೊಂಚ ನೀರನ್ನು ಚೆನ್ನಾಗೆ ಬೆರೆಸಿ. ಈ ಮಿಶ್ರಣವನ್ನು ದಪ್ಪನಾಗಿ ಎಲ್ಲಾ ಕೋಳಿಮಾಂಸದ ತುಂಡುಗಳ ಎಲ್ಲಾ ಬದಿಗಳಿಗೆ ದಪ್ಪನಾಗಿ ಮೆತ್ತಿಕೊಳ್ಳುವಂತೆ ಹಚ್ಚಿ.
ಒಂದು ದಪ್ಪತಳದ ಬಾಣಲೆಯಲ್ಲಿ ಎಣ್ಣೆಯನ್ನು ಸುರಿದು ಬಿಸಿಮಾಡಿ. ಎಣ್ಣೆ ಹುರಿಯಲು ಸಾಕಷ್ಟು ಬಿಸಿಯಾದ ಬಳಿಕ ಉರಿಯನ್ನು ಮಧ್ಯಮಕ್ಕಿಳಿಸಿ ಇದರಲ್ಲಿ ಕೋಳಿ ಮಾಂಸದ ತುಂಡುಗಳನ್ನು ನಿಧಾನವಾಗಿ ಇಳಿಬಿಟ್ಟು ಹುರಿಯಿರಿ. ನಡುನಡುವೆ ತಿರುವುತ್ತಾ ಎಲ್ಲಾ ಬದಿಗಳು ಚೆನ್ನಾಗಿ ಹುರಿದ ಬಳಿಕ ಎಣ್ಣೆಯಿಂದ ಹೊರತೆಗೆದು ಎಣ್ಣೆಯನ್ನು ಬಸಿಯಿರಿ. ಬಳಿಕ ಬಿಳಿ ಹೀರುಕಾಗದದ ಮೇಲೆ ಹರಡಿ ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡಿ.
ಬಳಿಕ ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಎರಡು ದೊಡ್ಡಚಮಚ ಎಣ್ಣೆ ಹಾಕಿ ಬಿಸಿಮಾಡಿ. ಇದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಬಾಡಿಸಿ. ಬಳಿಕ ಹಸಿಮೆಣಸು ಹಾಕಿ ಮೃದುವಾಗುವವರೆಗೆ ತಿರುವಿ.
ಇದಕ್ಕೆ ಸೋಯಾ ಸಾಸ್, ಶಿರ್ಕಾ ಹಾಗೂ ಹುರಿದಿಟ್ಟ ಕೋಳಿಮಾಂಸದ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಒಂದು ವೇಳೆ ನಿಮಗೆ ರೊಟ್ಟಿಯೊಡನೆ ನಂಜಿಕೊಳ್ಳಲು ಆಗುವಂತೆ ಇರಬೇಕಿದ್ದರೆ ಕೊಂಚ ಹೆಚ್ಚು ನೀರು ಬೆರೆಸಿ ನಡುನಡುವೆ ತಿರುವುತ್ತಾ ಒಂದೆರಡು ನಿಮಿಷ ಕುದಿಸಿ. ಬಿಸಿ ಬಿಸಿ ಇರುವಂತೆಯೇ ಬಡಿಸಿ.
