ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ : ದೇಶದಲ್ಲಿ 6ನೇ ಸ್ಥಾನದಲ್ಲಿ ಕರ್ನಾಟಕ : ಬಿ.ಎಸ್. ಯಡಿಯೂರಪ್ಪ -Vishwanews24
ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ : ದೇಶದಲ್ಲಿ 6ನೇ ಸ್ಥಾನದಲ್ಲಿ ಕರ್ನಾಟಕ : ಬಿ.ಎಸ್. ಯಡಿಯೂರಪ್ಪ -Vishwanews24
ಬೆಂಗಳೂರು: ವಿಶ್ವಸಂಸ್ಥೆಯು ನೀಡಿರುವ ಸುಸ್ಥಿರ ಅಭಿವೃದ್ಧಿಯು 17 ಗುರಿಗಳ ಸಾಧನೆಯಲ್ಲಿ ಕರ್ನಾಟಕವು ದೇಶದಲ್ಲಿ 6 ನೇ ಸ್ಥಾನದಲ್ಲಿದೆ. ಇದನ್ನು ಇನ್ನಷ್ಟು ಉತ್ತಮಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯೋಜನಾ ಇಲಾಖೆಯು ಸಿದ್ಧ ಪಡಿಸಿರುವ ಇಂದು ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ 2030 ರ ಕ್ರಿಯಾ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬಿಡುಗಡೆ ಮಾಡಿ ಮಾತನಾಡಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ 2030ರ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆಯು ಮುಂದಿನ 10 ವರ್ಷಗಳ ರಾಜ್ಯದಲ್ಲಿ ಸುಸ್ಥಿರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಪೂರಕವಾದ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಕೋನವನ್ನು ಅನುಷ್ಠಾನಕ್ಕೆ ತರಲು ಇದು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ರಾಜ್ಯದ ಎಲ್ಲ ಜನರಿಗೆ ಉತ್ತಮ ಜೀವನೋಪಾಯ, ಸ್ವಚ್ಛ ಪರಿಸರ, ಉತ್ತಮ ರೋಗ್ಯ, ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಇತ್ಯಾದಿ ಗುರಿಗಳನ್ನು ತಲುಪಲು ಈ ಕ್ರಿಯಾ ಯೋಜನೆ ಒತ್ತು ನೀಡುತ್ತದೆ. ಹೆಚ್ಚು ಸುಧಾರಣೆಯ ಅಗತ್ಯವಿರುವ ಪ್ರದೇಶ ಮತ್ತು ಕಾರ್ಯಕ್ರಮಗಳಿಗೆ ಮುಂದಿನ ಆಯವ್ಯಯದಲ್ಲಿ ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರು ಮಾತನಾಡಿ, ತಾವು ಕರ್ನಾಟಕಕ್ಕಿಂತ ಉತ್ತಮ ಶ್ರೇಯಾಂಕ ಹೊಂದಿರುವ ಕೇರಳ, ಗುಜರಾತ್ ಮತ್ತು ಇತರ ರಾಜ್ಯಗಳಿಗೆ ಭೇಟಿ ನೀಡಿದ್ದು, ಆ ರಾಜ್ಯಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ 2030 ಸಾಧನೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲಾಗಿದೆ. ಇದರ ವಿವರಗಳನ್ನು ಯೋಜನಾ ಮಂಡಳಿಯ ಸಭೆಯಲ್ಲಿ ಪ್ರಸ್ತುತ ಪಡಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
