ಸೂಕ್ತ ಪ್ರಸ್ತಾವನೆ ಸಲ್ಲಿಕೆಯಾದರೆ ನಂದಿಕೂರಿನಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗೆ ಅನುಮತಿ: ಸಚಿವ ರಾಮಮೋಹನ್ ನಾಯ್ಡು – vishwanews24

Featured, ಉಡುಪಿ

ಸೂಕ್ತ ಪ್ರಸ್ತಾವನೆ ಸಲ್ಲಿಕೆಯಾದರೆ ನಂದಿಕೂರಿನಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗೆ ಅನುಮತಿ: ಸಚಿವ ರಾಮಮೋಹನ್ ನಾಯ್ಡು

ಉಡುಪಿ: ರಾಜ್ಯ ಸರಕಾರವೂ ಸೇರಿದಂತೆ ಯಾವುದೇ ಏರ್‌ಪೋರ್ಟ್ ಡೆವಲಪರ್‌ರಿಂದ ಸೂಕ್ತವಾದ ಪ್ರಸ್ತಾವನೆ ಸಲ್ಲಿಕೆಯಾದರೆ ಕಾಪು ತಾಲೂಕಿನ ನಂದಿಕೂರಿನಲ್ಲಿ ಉಡಾನ್ ಯೋಜನೆಯಡಿ ಅಂತಾರಾಷ್ಟ್ರೀಯ ಸಬ್ ಏರ್‌ಪೋರ್ಟ್‌ನ್ನು ನಿರ್ಮಿಸಲು ಇಲಾಖೆ ಅನುಮೋದನೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ದು ಭರವಸೆ ನೀಡಿದ್ದಾರೆ.

ನಂದಿಕೂರಿನಲ್ಲಿ ವಿಮಾನನಿಲ್ದಾಣ ಸ್ಥಾಪನೆಯ ಕುರಿತಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆ ಮೇರೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ಅ.14ರಂದು ಇಲಾಖೆಗೆ ಬರೆದ ಪತ್ರಕ್ಕೆ ಜ.31ರಂದು ನೀಡಿದ ಉತ್ತರದಲ್ಲಿ ರಾಮ್‌ಮೋಹನ್ ನಾಯ್ದು ಈ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ :

ಫೆ.12ರಿಂದ ಮಾ.13ರವರೆಗೆ ಮಂಗಳೂರು-ಮೂಡುಬಿದಿರೆ ಹೆದ್ದಾರಿ ದುರಸ್ತಿ: ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಬದಲಿ ರಸ್ತೆ – vishwanews24

ಭಾರತ ಸರಕಾರ 2008ರಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್(ಜಿಎಫ್‌ಎ) ಪಾಲಿಸಿಯನ್ನು ರೂಪಿಸಿದ್ದು, ಇದರ ಮಾರ್ಗ ಸೂಚಿಗಳು, ಕಾರ್ಯವಿಧಾನ ಹಾಗೂ ನಿಬಂಧನೆಗಳಂತೆ ದೇಶದಲ್ಲಿ ನೂತನ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮತಿಯನ್ನು ನೀಡುತ್ತದೆ ಎಂದವರು ಹೇಳಿದ್ದಾರೆ.

ಯೋಜನೆಯಂತೆ ರಾಜ್ಯ ಸರಕಾರವೂ ಸೇರಿದಂತೆ, ಯಾವುದೇ ಏರ್‌ಪೋರ್ಟ್ ಡೆವಲಪರ್‌ಗಳು ವಿಮಾನ ನಿಲ್ದಾಣವನ್ನು ನಿರ್ಮಿಸಲು ಬಯಸಿದರೆ, ಸೂಕ್ತವಾದ ಜಾಗವನ್ನು ಗುರುತಿಸಿ, ಆ ಜಾಗದಲ್ಲಿ ನಿಲ್ದಾಣ ಸ್ಥಾಪನೆಗೆ ಸಾಧ್ಯತಾ ಅಧ್ಯಯನ ನಡೆಸಿ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ‘ಜಾಗದ ಕ್ಲಿಯರೆನ್ಸ್’ಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಆಗ ಸರಕಾರ ಅದನ್ನು ಪರಿಶೀಲಿಸಿ ಇನ್‌ಪ್ರಿನ್ಸಿಪಲ್ ಅನುಮೋದನೆ ನೀಡುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಇದನ್ನೂ ಓದಿ :

ಮಂಗಳೂರಿಗರಿಗೆ ನೈರುತ್ಯ ರೈಲ್ವೆಯಿಂದ ಡಬಲ್ ಆಘಾತ : ಇತ್ತ ವಂದೇ ಭಾರತ್ ಗೂ ಖೋತಾ, ಅತ್ತ ಗೊಮ್ಮಟೇಶ್ವರ ಎಕ್ಸ್ ಪ್ರಸ್‌ಗೂ ಕೊಕ್ಕೆ? vishwanews24

ಕರ್ನಾಟಕದ ನಂದಿಕೂರಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಮುಂದೆ ರಾಜ್ಯ ಸರಕಾರ ಅಥವಾ ಏರ್‌ಪೋರ್ಟ್ ಡೆವಲಪರ್‌ರಿಂದ ಇದಕ್ಕೆ ಪ್ರಸ್ತಾಪ ಸಲ್ಲಿಕೆಯಾದರೆ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಪಾಲಿಸಿ 2008ರ ನಿಬಂಧನೆಗಳಂತೆ ಅನುಮೋದನೆಗೆ ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.

ಸದ್ಯ ದೇಶದಲ್ಲಿ 21 ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗಳಿದ್ದು, ಇವುಗಳಲ್ಲಿ ಕರ್ನಾಟಕದ ಕಲಬುರ್ಗಿ, ವಿಜಯಪುರ, ಹಾಸನ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳೂ ಸೇರಿವೆ. ಅಭಿವೃದ್ಧಿಯಾಗದ ಜಾಗದಲ್ಲಿ ಸಂಪೂರ್ಣ ಹೊಸದಾಗಿ ವಿಮಾನನಿಲ್ದಾಣವನ್ನು ನಿರ್ಮಿಸಿದರೆ ಅದನ್ನು ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಎಂದು ಕರೆಯಲಾಗುತ್ತದೆ. ನವಿಮುಂಬಯಿ ಇಂಟರ್‌ನೇಷನಲ್ ಏರ್‌ಪೋರ್ಟ್ ದೇಶದ ಅತ್ಯಂತ ವಿಶಾಲವಾದ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಎನಿಸಿಕೊಂಡಿದೆ.

Leave a Reply