ಸ್ವರಕ್ಷಣೆಗಾಗಿ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಸಂಪೂರ್ಣ ಬೆಂಬಲ : ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ವಾಷಿಂಗ್ಟನ್‌: ‘ಸ್ವರಕ್ಷಣೆಗಾಗಿ ಭಾರತದ ಹಕ್ಕನ್ನು ಬೆಂಬಲಿಸುತ್ತೇವೆ’ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್‌ ಅವರಿಗೆ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವೋಂತಿಪೊರದಲ್ಲಿ ಜೈಷ್‌ ಉಗ್ರರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಲು ಜಾನ್‌ ಬೋಲ್ಟನ್‌ ಅವರು ಅಜಿತ್‌ ದೋವಾಲ್‌ ಅವರಿ‌ಗೆ  ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಅಮೆರಿಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

‘ನಾವು ಸ್ವರಕ್ಷಣೆಗಾಗಿ ಭಾರತದ ಹಕ್ಕನ್ನು ಬೆಂಬಲಿಸುತ್ತೇವೆ ಎಂದು ನಾನು ಇಂದು ಅಜಿತ್‌ ದೋವಾಲ್‌ ಅವರಿಗೆ ತಿಳಿಸಿದ್ದೇನೆ. ಈ ಕುರಿತು ಈ ಬೆಳಿಗ್ಗೆಯಿಂದ ಅವರ ಜತೆ ಎರಡು ಬಾರಿ ಮಾತನಾಡಿದ್ದೇನೆ ಮತ್ತು ಭಯೋತ್ಪಾದಕರ ದಾಳಿಗೆ ಅಮೆರಿಕ ಸಂತಾಪ ವ್ಯಕ್ತಪಡಿಸುತ್ತದೆ’ ಎಂದು ಪಿಟಿಐಗೆ ತಿಳಿಸಿದ್ದಾಗಿ ವಿಶೇಷ ವರದಿ ಮಾಡಿದೆ.

‘ಪಾಕಿಸ್ತಾನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಆಶ್ರಯ ಒದಗಿಸುವ ಕೆಲಸ ಮಾಡಬಾರದು. ಅವರ ಗುರಿ ಇರುವುದು ಗೊಂದಲ ಸೃಷ್ಟಿ, ಹಿಂಸೆ ಮತ್ತು ಈ ಪ್ರದೇಶದಲ್ಲಿ ಭಯೋತ್ಪಾದನೆ ಸೃಷ್ಟಿ ಮಾತ್ರ’ ಎಂದು ಅಮೆರಿಕದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ಹೇಳಿದ್ದಾರೆ.

‘ಭಾರತ ಮತ್ತು ಅಮೆರಿಕದ ನಡುವೆ ಇರುವ ಭಯೋತ್ಪಾದನೆ ತಡೆ ಸಹಕಾರ ಮತ್ತು ಸಮನ್ವಯವನ್ನು ಈ ದಾಳಿಯು ಇನ್ನಷ್ಟು ಗಟ್ಟಿಗೊಳಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ಉಗ್ರರಿಗೆ ಸುರಕ್ಷಿತ ತಾಣ ಒದಗಿಸುವ ಕೆಲಸವನ್ನು ಕೊನೆಗೊಳಿಸಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕ ಅತ್ಯಂತ ಸ್ಪಷ್ಟವಾಗಿ ಹೇಳಿದೆ ಎಂದು ಅವರು ತಿಳಿಸಿದ್ದಾರೆ.