ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಫೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ? ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ ??: ಡಿ.ಕೆ. ಶಿ -Vishwanews24
ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಫೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ? ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ ??: ಡಿ.ಕೆ. ಶಿ -Vishwanews24
ಬೆಂಗಳೂರು : ‘ರಾಜ್ಯ ಸರ್ಕಾರ ತನಗೆ ಇಚ್ಛೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ? ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಫೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು ”ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸರಕಾರದ ಪ್ರತಿನಿಧಿಗಳು ಜನರನ್ನು ಬೇರೆ ರೀತಿಯಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ. ಹಗಲು ವೇಳೆ ಓಡಾಟ ಮಾಡಬಹುದು, ರಾತ್ರಿ ಹೊತ್ತು ಕರ್ಫ್ಯು ಮಾಡುವುದೇಕೆ? ಇದರಿಂದ ಸೋಂಕು ನಿಯಂತ್ರಣ ಸಾಧ್ಯವಾ? ಈ ಬಗ್ಗೆ ಯಾರ ಬಳಿ ಚರ್ಚೆ ಮಾಡಿದ್ದಾರೆ? ರಾತ್ರಿ ವೇಳೆ ಸೋಂಕು ಹರಡುತ್ತದೆ ಎನ್ನುವುದಕ್ಕೆ ಪುರಾವೆ, ದಾಖಲೆಗಳಿವೆಯೇ? ಹಗಲು ವೇಳೆ ಹರಡುವುದಿಲ್ಲವೇ?’ ಎಂದು ಪ್ರಶ್ನಿಸಿದರು.
‘ಹಗಲಲ್ಲಿ ಸಾವಿರಾರು ಜನ ಸೇರುತ್ತಾರೆ, ಆಗ ಕೊರೋನಾ ಸೋಂಕು ತಗುಲುವುದಿಲ್ಲವೇ? ಯಾವುದೋ ಕೆಲವು ವರ್ಗಗಳಿಗೆ ತೊಂದರೆ ಕೊಡಲು ತೀರ್ಮಾನ ಕೈಗೊಳ್ಳಬಾರದು. ‘ನೀವು ಕೊರೋನಾ ನಿಯಂತ್ರಣ ಎಲ್ಲಿ ಮಾಡಿದ್ದೀರಿ? ಸುಮ್ಮನೆ ವಿರೋಧ ಪಕ್ಷಗಳ ಬಗ್ಗೆ ಮಾತನಾಡುವುದಲ್ಲ. ಅಧಿವೇಶನ ಕರೆಯಿರಿ. ಎಲ್ಲರೂ ಚರ್ಚೆ ಮಾಡೋಣ. ಅವರ ಇಷ್ಟಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ಸರ್ಕಾರವನ್ನು ತಮ್ಮ ಖಾಸಗಿ ಆಸ್ತಿ ಎಂದು ಭಾವಿಸಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ವಿಚಾರವಾಗಿ ಯಾರನ್ನಾದರೂ ಕರೆದು ಮಾತನಾಡಿದ್ದಾರಾ? ಯಾರದಾದರೂ ಸಲಹೆ ಪಡೆದಿದ್ದಾರಾ?’ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
