ಹಜ್‌ ಯಾತ್ರೆ : ಸಮಸ್ತ ನಾಡಿನ ಪ್ರತಿನಿಧಿಗಳಾಗಿ ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡಿ : ಯು.ಟಿ. ಖಾದರ್‌ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಹಜ್‌ ಯಾತ್ರೆ ಮಾಡುವ ನೀವು ಅದೃಷ್ಟಶಾಲಿಗಳಾಗಿದ್ದು, ಸಮಸ್ತ ನಾಡಿನ ಪ್ರತಿನಿಧಿಗಳಾಗಿ ದೇಶದ ಒಳಿತಿಗಾಗಿ ಪ್ರಾರ್ಥನೆ (ದುವಾ)ಮಾಡಿ ಎಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಕರ್ನಾಟಕ ರಾಜ್ಯ ಹಜ್‌ ಸಮಿತಿ ಅಶ್ರಯದಲ್ಲಿ ಹಜ್‌ ಕ್ಯಾಂಪ್‌ ನಿರ್ವಹಣಾ ಸಮಿತಿ ಮಂಗಳೂರಿನ ಸಹಯೋಗದೊಂದಿಗೆ ಬಜಪೆ ಅನ್ಸಾರ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ಹಜ್‌ ವಿಮಾನ ಯಾತ್ರೆ-2019ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪವಿತ್ರ ಹಜ್‌ ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯ ಕನಸಾಗಿರುತ್ತದೆ. ಆದರೆ ಎಲ್ಲರಿಂದ ಇದು ಸಾಧ್ಯವಿಲ್ಲ. ಅದಕ್ಕೆ ಅಲ್ಲಾಹನ ಕೃಪೆ ಬೇಕು ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಹಜ್‌ ಘರ್‌ ನಿರ್ಮಾಣಕ್ಕೆ ಈಗಾಗಲೇ 70 ಸೆಂಟ್ಸು ಜಾಗ ನಿಗದಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನುದಾನ ನೀಡಲು ಮುಂದೆ ಬಂದಿದ್ದು ಸದ್ಯದಲ್ಲೇಶಿಲಾನ್ಯಾಸ ನಡೆಯಲಿದೆ ಎಂದರು.

ಸಚಿವ ಜಮೀರ್‌ ಆಹ್ಮದ್‌ ಖಾನ್‌ಅವರು ಜಿಲ್ಲೆಯಿಂದ 11 ಉಲೇಮಾಗಳಿಗೆ ಹಾಗೂ ರಾಜ್ಯದಿಂದ 100ಕ್ಕಿಂತ ಹೆಚ್ಚು ಉಲೇಮಾಗಳಿಗೆ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಲು ಸಹಾಯ ಮಾಡಲಿದ್ದಾರೆ ಎಂದು ಖಾದರ್‌ ತಿಳಿಸಿದರು.

ಮಂಗಳೂರು ಮೂಲಕ ಈ ಬಾರಿ ಒಟ್ಟು 747 ಮಂದಿ ಹಜ್‌ ಯಾತ್ರೆ ಕೈಕೊಳ್ಳಲಿದ್ದಾರೆ. ಇದರಲ್ಲಿ ದ.ಕ. ಜಿಲ್ಲೆಯ 610, ಉಡುಪಿ ಜಿಲ್ಲೆಯ 72, ಕೊಡಗಿನ 39, ಹಾಸನದ 20, ಚಿಕ್ಕಮಗಳೂರಿನ 6 ಮಂದಿ ಇದ್ದಾರೆ. ರಾಜ್ಯ ಮಟ್ಟದಲ್ಲಿ ಒಟ್ಟು 14 ಸಾವಿರ ಹಜ್‌ ಯಾತ್ರಾರ್ಥಿಗಳಿಂದ ಅರ್ಜಿಗಳು ಬಂದಿದ್ದವು. ಈ ಬಾರಿ 8,739 ಮಂದಿಗೆ ಅವಕಾಶ ಲಭಿಸಿದೆ. ಕಳೆದ ಬಾರಿ 6,300 ಮಂದಿಗೆ ಮಾತ್ರ ಅವಕಾಶ ಇತ್ತು ಎಂದು ಹೇಳಿದರು.

ಮಾಜಿ ಶಾಸಕರಾದ ಬಿ.ಎ. ಮೊದಿನ್‌ಬಾವಾ, ಕೆ.ಎಸ್‌. ಮಹಮ್ಮದ್‌ ಮಸೂದ್‌, ಮುಖಂಡರಾದ ಮಹಮ್ಮದ್‌ ಮೋನು, ಜಿಲ್ಲಾ ವಕ್ಫ್ ಯು.ಕೆ. ಮೋನು ಕಣಚೂರು, ಬಿ.ಎಂ. ಝಕರಿಯಾ, ವೈ. ಮಹಮ್ಮದ್‌ ಕುಂಞಿ, ಬಿ.ಎಂ. ಮುಮ್ತಾಝ್ ಅಲಿ, ಎಸ್‌.ಎಂ. ರಶೀದ್‌ ಹಾಜಿ, ಹನೀಫ್‌ ಹಾಜಿ ಕೊಳತ್ತಮಜಲು, ಎಂ.ಎಸ್‌. ಕರೀಂ, ಕೆ.ಕೆ. ಸಾಹುಲ್ ಹಮೀದ್‌, ಹೈದರ್‌ ಪರ್ತಿಪಾಡಿ, ಅಬ್ದುಲ್ ರಶೀದ್‌, ಅಶ್ರಫ್‌, ಬಶೀರ್‌, ಮಹಮ್ಮದ್‌ ಕುಂಜತ್ತಬೆೈಲು, ಬಶೀರ್‌ ಬೆೈಕಂಪಾಡಿ, ಸಿರಾಜ್‌, ಮಹಮದ್‌ ಶರೀಫ್‌, ಹನೀಫ್‌ ಮಹಮದ್‌ ಉಪಸ್ಥಿತರಿದ್ದರು.