ಹತಾಶರಾಗಬೇಡಿ ನಿಮ್ಮೊಂದಿಗೆ ನಾವಿದ್ದೇವೆ ,ಇಡೀ ಭಾರತವಿದೆ : ಇಸ್ರೋ ವಿಜ್ಞಾನಿಗಳಿಗೆ ಮೋದಿ -Vishwanews24
ಬೆಂಗಳೂರು: ಚಂದ್ರನನ್ನು ಸ್ಪರ್ಶಿಸುವ ನಮ್ಮ ಸಂಕಲ್ಪ ಇನ್ನೂ ಬಲವಾಗಿದೆ ಮತ್ತು ಇನ್ನೂ ಉತ್ತಮವಾದದ್ದು ಬರಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳಿಗೆ ತಿಳಿಸಿದರು.
ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಏಜೆನ್ಸಿಯ ಪ್ರಧಾನ ಕಚೇರಿಯಲ್ಲಿ ಇಸ್ರೋ ವಿಜ್ಞಾನಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿ, ನೀವು ದೇಶಕ್ಕಾಗಿ ಬದುಕುವವರು. ಭಾರತದ ಕೀರ್ತಿಯನ್ನು ಉನ್ನತ ಮಟ್ಟದಲ್ಲಿಡಲು ನಿಮ್ಮ ಸ್ವಂತ ಕನಸುಗಳನ್ನು ತ್ಯಾಗ ಮಾಡುವ ಮತ್ತು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವವರು ನೀವೇ ಎಂದು ಹುರಿದುಂಬಿಸಿದರು.
ವಿಕ್ರಮ್ ಲ್ಯಾಂಡರ್ನ ಯೋಜಿತ ಸ್ಪರ್ಶವನ್ನು ವೀಕ್ಷಿಸಲು ಶುಕ್ರವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದ ಪ್ರಧಾನಿ ಮೋದಿ, ಇಸ್ರೋ ವಿಜ್ಞಾನಿಗಳಿಗೆ ಇಡೀ ದೇಶವು ನಿಮ್ಮೊಂದಿಗೆ ನಿಂತಿದೆ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇನ್ನೂ ಉತ್ತಮವಾದದ್ದು ಬರಬೇಕಿದೆ. ಕಳೆದ ರಾತ್ರಿಯ ನಿಮ್ಮ ಮನಸ್ಸಿನ ಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿಮ್ಮ ಮುಖದಲ್ಲಿನ ದುಃಖವನ್ನು ನಾನು ಓದಬಲ್ಲೆ. ನೀವು ರಾತ್ರಿ ಮಲಗಲಿಲ್ಲ. ಇಂದಿನ ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಇಡೀ ಭಾರತವಿದೆ ಎಂದು ಹೇಳಿ ಇಸ್ರೋ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಹಾಗೂ ಪರಿಶ್ರಮವನ್ನು ಕೊಂಡಾಡಿದರು.
ರೂಪಿತ ಯೋಜನೆಗಳು ನಿಖರವಾಗಿ ನಡೆಯುತ್ತಿಲ್ಲ ಎಂಬುದನ್ನು ನಾನು ನೋಡಿದಾಗ ನಿಮ್ಮ ಒತ್ತಡವನ್ನು ಹೆಚ್ಚಿಸಲು ನಾನು ಬಯಸುವುದಿಲ್ಲ. ಅದಕ್ಕಾಗಿಯೇ ನಾನು ಹೊರಟು ನಿಮ್ಮೆಲ್ಲರಿಗೂ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಸಂಗ್ರಹಿಸಲು ಸ್ವಲ್ಪ ಸಮಯವನ್ನು ನೀಡಿದ್ದೇನೆ. ಕಠಿಣ ಪರಿಶ್ರಮಗಳು ಹೊಸ ಸನ್ನಿವೇಶಕ್ಕೆ ನಾಂದಿ ಹಾಡುತ್ತವೆ. ಭವಿಷ್ಯದಲ್ಲಿ ಇಸ್ರೋ ಯಶಸ್ಸನ್ನು ಕಾಣಲಿದೆ. ಚಂದ್ರಯಾನ ಪ್ರಯಾಣ ಒಂದು ಸುಂದರ ಕ್ಷಣ. ದೇಶಕ್ಕಾಗಿ ನಿಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಿರಿ. ಸಾಧನೆಯ ಕೊನೆಯ ಕ್ಷಣದಲ್ಲಿ ನಿಮಗೆಲ್ಲ ನೋವಾಗಿದೆ. ಭಾರತಮಾತೆಯ ಸೇವೆಗೆ ಶ್ರಮವಹಿಸಿದ್ದೀರಿ. ನಿಮ್ಮ ಶ್ರಮವನ್ನು ಇಡೀ ದೇಶವೇ ಕೊಂಡಾಡುತ್ತಿದೆ ಎಂದು ಹೇಳಿದರು.
