ಚಂಡೀಘಡ: ಹರ್ಯಾಣ ವಿಧಾನಸಭಾ ಚುನಾವಣಾ ಫಲಿಂತಾಶ ಅತಂತ್ರದತ್ತ ಸಾಗಿರುವಂತೆಯೇ ಇತ್ತ ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ ಸಿಎಂ ಸ್ಥಾನ ನೀಡಿದವರಿಗೇ ನಮ್ಮ ಬೆಂಬಲ ಎಂದು ಘೋಷಣೆ ಮಾಡಿದ್ದಾರೆ.
90 ಸ್ಥಾನದ ಹರ್ಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 46 ಸ್ಥಾನಗಳ ಅಗತ್ಯತೆ ಇದ್ದು, ಬಿಜೆಪಿ ಮೈತ್ರಿಕೂಟ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮೈತ್ರಿಕೂಟ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಹರ್ಯಾಣದಲ್ಲಿ ಇತರೆ ಪಕ್ಷಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆ ಇದ್ದು, ಒಟ್ಟು 20 ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರು ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟಾಲ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಹರ್ಯಾಣದ ಜನತೆ ತಿರಸ್ಕರಿಸಿದ್ದಾರೆ. ಹೀಗಾಗಿ ನಾವು ನಮಗೆ ಯಾರು ಸಿಎಂ ಸ್ಥಾನ ನೀಡುತ್ತಾರೆಯೋ ಅವರಿಗೇ ನಮ್ಮ ಬೆಂಬಲ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.