ಹವಾಮಾನ ವೈಪರೀತ್ಯದಿಂದ ತತ್ತರಿಸಿದ ಕರಾವಳಿಯ ಮೀನುಗಾರಿಕೆ ,ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಶೇ. 20ರಷ್ಟು ಬೋಟುಗಳು -Vishwanews24

Featured, ಉಡುಪಿ

ಮಲ್ಪೆ: ಶನಿವಾರ ಮಲ್ಪೆ ಮೀನುಗಾರಿಕೆ ಬಂದರಿನಿಂದ ಸುಮಾರು 70-80ರಷ್ಟು ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಬಹುತೇಕ ದೋಣಿಗಳು ರವಿವಾರ ರಾತ್ರಿಯಿಂದ ಆಳಸಮುದ್ರಕ್ಕೆ ತೆರಳಲು ಸಿದ್ಧವಾಗಿವೆ.

ಕೆಲವು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕ್ಯಾರ್‌ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಮೀನು ಗಾರಿಕೆಗೆ ತೆರಳಿದ ಎಲ್ಲ ಬೋಟುಗಳು ದಡ ಸೇರಿದ್ದವು. ಅದು ಒಮಾನ್‌ನತ್ತ ಮುಖ ಮಾಡಿದ ಬಳಿಕ ಮೀನುಗಾರಿಕೆ ಆರಂಭಿಸಲು ಸಿದ್ಧತೆ ನಡೆದಿದ್ದರೂ “ಮಹಾ’ ಉಂಟಾಗುವ ಎಚ್ಚರಿಕೆ ಮೀನುಗಾರರನ್ನು ತತ್ತರಿಸುವಂತೆ ಮಾಡಿತ್ತು. ಹವಾಮಾನ ಮತ್ತು ಮೀನುಗಾರಿಕೆ ಇಲಾಖೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿತ್ತು. ಸಮುದ್ರ ಪ್ರಕ್ಷುಬ್ಧಗೊಂಡು ಕೆಲವೆಡೆ ಸಮುದ್ರ ಕೊರೆತ ಕಾಣಿಸಿಕೊಂಡಿತ್ತು.

ಪಶ್ಚಿಮ ಸಮುದ್ರದಲ್ಲಿ  ಉಂಟಾಗುತ್ತಿರುವ ಹವಾಮಾನ ವೈಪರೀತ್ಯದಿಂದ ಕರಾವಳಿಯ ಮೀನುಗಾರಿಕೆ ತತ್ತರಿಸಿದೆ. ಈ ಋತುವಿನ ಆರಂಭದಿಂದಲೇ ಸಮಸ್ಯೆಗಳು ಎದುರಾಗಿರುವುದರಿಂದ ನಿರೀಕ್ಷಿತ ಲಾಭ ದೊರೆತಿಲ್ಲ.  ಬೋಟುಗಳು ಸಂಪೂರ್ಣ ನಷ್ಟವನ್ನು ಅನುಭವಿಸುತ್ತಿವೆ.

ತೀರದಲ್ಲಿ ಶಾಂತವಾಗಿದ್ದರೂ ಆಳ ಸಮುದ್ರದಲ್ಲಿ ಅಲೆಗಳ ಅಬ್ಬರ ಇರುವ ಸಾಧ್ಯತೆ ಇದೆ. ಇಲಾಖೆಯ ಸೂಚನೆಯನ್ವಯ ಡೀಸೆಲ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಮಲ್ಪೆ ಬಂದರಿನಿಂದ ಶೇ. 20ರಷ್ಟು ಬೋಟುಗಳು ಮೀನುಗಾರಿಕೆಗೆ ತೆರಳಿವೆ.

“ಮಹಾ’ ಚಂಡಮಾರುತದ ಪ್ರಭಾವ ನ. 6ರ ವರೆಗೆ ಇರುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ. ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲಿಯವರೆಗೂ ಡೀಸೆಲ್‌ ಪೂರೈಕೆ ನಿಲ್ಲಿಸುವಂತೆ ಬಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಬಂದರಿನಲ್ಲಿ ನಿರಂತರವಾಗಿ ಘೋಷಣೆ ಮಾಡಲು ಸೂಚನೆ ಕೊಟ್ಟಿದೆ.
-ಗಣೇಶ್‌ ಕೆ., ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ