ಹಸಿರು ಶಾಲು ಗರ್ಜನೆ; ರಾಜ್ಯಾದ್ಯಂತ ರೈತರಿಂದ ಭಾರೀ ಪ್ರತಿಭಟನೆ
ಬೆಂಗಳೂರು: ಸಂಪೂರ್ಣ ಸಾಲಮನ್ನಾಗೆ ಒತ್ತಾಯಿಸಿ ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ರೈತರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ರೈತರು ಬೃಹತ್ ರ್ಯಾಲಿ ನಡೆಸಿ ರಾಜ್ಯದ ರೈತರ ಎಲ್ಲ ಸಾಲಮನ್ನಾ ಮಾಡಬೇಕು ಎಂದು ಒಕ್ಕೊಲರ ಆಗ್ರಹ ಮಾಡಿದರು. ಉಳಿದಂತೆ ಬೆಳಗಾವಿ, ಮಂಡ್ಯ, ಮೈಸೂರು, ಗುಂಡ್ಲುಪೇಟೆ ಸೇರಿದಂತೆ ಹಲವೆಡೆ ರೈತ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿವೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆಗಳಿಂದ ನಗರಕ್ಕೆ ಆಗಮಿಸಿದ್ದ ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾವಣೆಗೊಂಡು ನಂತರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ತಳ್ಳಾಟ-ನೂಕಾಟದಲ್ಲಿ ಕೆಲವು ರೈತರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ಕೆಲವು ರೈತರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು.
ಮುಖ್ಯಮಂತ್ರಿ ಭೇಟಿ ಮಾಡಿಸುವುದಾಗಿ ಭರವಸೆ ನೀಡಿ ಪೊಲೀಸ್ ಅಧಿಕಾರಿಗಳು ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಮುಖಂಡರನ್ನು ಕರೆದೊಯ್ದು ಭೇಟಿ ಮಾಡಿಸದೆ ವಾಪಸ್ ಕಳುಹಿಸಿದರು. ಇದರಿಂದ ಮತ್ತಷ್ಟು ಕೆರಳಿದ ರೈತರು ಮತ್ತೆ ಸ್ವಾತಂತ್ರ್ಯ ಉದ್ಯಾನದ ಬಳಿ ಪ್ರತಿಭಟನೆ ನಡೆಸಿ ಸಿಎಂ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸಂಜೆ ಸಹಕಾರ ಸಚಿವ ಬಂಡೆಪ್ಪ ಕಾಂಶಪುರ್, ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ, ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿಪಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಮುಖ್ಯಮಂತ್ರಿಯವರ ಜತೆ ಮಾತುಕತೆ ನಂತರ ನಮ್ಮ ಹೋರಾಟದ ಮುಂದಿನ ರೂಪು-ರೇಷೆ ನಿರ್ಧರಿಸಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
54 ಸಾವಿರ ಕೋಟಿ ರೂ.ಬೆಳೆೆ ಸಾಲ:
ಬಜೆಟ್ಗೂ ಮುನ್ನಾ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ರೈತರ ಸಂಪೂರ್ಣ ಸಾಲಮನ್ನಾದ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈಗ 54 ಸಾವಿರ ಕೋಟಿ ರೂ. ಬೆಳೆೆ ಸಾಲದಲ್ಲಿ ಕೇವಲ 34 ಕೋಟಿ ರೂ. ಸುಸ್ತಿ ಬೆಳೆ ಸಾಲ ಮಾತ್ರಮನ್ನಾ ಮಾಡಿದ್ದಾರೆ. ಹಲವು ಷರತ್ತುಗಳನ್ನು ಹಾಕಿ ರೈತರ ಬೆಳೆ ಸಾಲಮನ್ನಾ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ದೂರಿದರು.
ರಾಜ್ಯದ ರೈತರ ಸಾಲ, 1ಲಕ್ಷ 20 ಸಾವಿರ ಕೋಟಿ ರೂ.ಇದೆ. ಇದರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಉಳಿದ, 86 ಕೋಟಿ ರೂ.ಗಳನ್ನು ಯಾರು ತೀರಿಸಬೇಕು. ನಾವು ರೈತರ ಪರ ಎಂದು ಅಬ್ಬರಿಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಕಷ್ಟ ದಲ್ಲಿರುವ ರಾಜ್ಯದ ರೈತರ ನೆರವಿಗೆ ಬರಬೇಕು, ಸಂಪೂರ್ಣ ಸಾಲ ಮನ್ನಾ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ರೈತರ ಸಾಲವನ್ನ ಸಂಪೂರ್ಣ ಮನ್ನಾ ಮಾಡುವ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಗಳು ಮತ್ತಷ್ಟು ನಡೆಯಲಿವೆ. ಇದೇ 21ರಂದು ಹಾವೇರಿಯಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
