ಹಾಲಾಡಿಗೆ ಬಿಜೆಪಿ ಟಿಕೆಟ್ : ರಾಜೀನಾಮೆ ನೀಡಿದ ಕುಂದಾಪುರದ ಬಿಜೆಪಿ ಕಾರ್ಯಕರ್ತರು, ಕುಂದಾಪುರ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

Featured, ಉಡುಪಿ

ಉಡುಪಿ  :  ವಲಸಿಗರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ ಎಂಬ ಮೂಲ ಬಿಜೆಪಿಗರ ಪರದೆ ಹಿಂದಿನ ಭಿನ್ನಮತ ಇದೀಗ ಸ್ಪೋಟಗೊಂಡು ರಾಜಿನಾಮೆ ನೀಡುವ ವರೆಗೂ ತಲುಪಿದ್ದು ಕುಂದಾಪುರದಲ್ಲಿ ಬಿಜೆಪಿಗೆ ಈ ಭಿನ್ನಮತ ಅಡ್ಡಪರಿಣಾಮ ಆಗುವ ಎಲ್ಲಾ ಲಕ್ಷಣ ಗೋಚರಿಸ್ತಾಯಿದೆ.

ಕುಂದಾಪುರದ ವಾಜಪೇಯಿ ಎಂದೇ ಹೆಸರುಗಳಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಮೂಲ ಬಿಜೆಪಿಗರು ಮತ್ತೆ ತಿರುಗಿ ಬಿದ್ದಿದ್ದಾರೆ.  ಬೂದಿ ಮುಚ್ಚಿದ ಕೆಂಡದಂತೆ ಇದ್ದ ಹಾಲಾಡಿ ವಿರುದ್ಧದ ಅಸಮದಾನ ಇದೀಗ ದೊಡ್ಡ ಮಟ್ಟದಲ್ಲೇ ಸ್ಪೋಟ ಗೊಂಡಿದೆ. ಕುಂದಾಪುರದ ಬಿಜೆಪಿಯಲ್ಲಿ ಭಿನ್ನಮತ ಎಷ್ಟರ ಮಟ್ಟಿಗೆ ಭುಗಿಲೆದಿದೆ ಎಂದರೇ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಸೇರಿದಂತೆ ಏಳು ಪದಾಧಿಕಾರಿಗಳು ರಾಜಿನಾಮೆ ನೀಡಿ ಹಾಲಾಡಿ ವಿರುದ್ದವೇ ಪ್ರಚಾರ ಮಾಡುವ ಶಪತ  ಕೈಗೊಂಡಿದ್ದಾರೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಬಿಜೆಪಿ ತ್ಯಜಿಸಿ ಪಕ್ಷೇತರರಾಗಿ ಬಿಜೆಪಿ ವಿರುದ್ದವೇ ಗೆದ್ದು ಬಂದಿದ್ದರು. ಇದೀಗ ಮತ್ತೆ ವಲಸಿಗರಾಗಿ ಬಿಜೆಪಿ ಸೇರಿರುವ ಹಾಲಾಡಿ ಮತ್ತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರು.


ಈ ವೇಳೆ ಯಡಿಯೂರಪ್ಪ ಸ್ವತಃ ಬಹಿರಂಗವಾಗಿ ಹಾಲಾಡಿಯೇ ಮುಂದಿನ ಅಭ್ಯರ್ಥಿ ಎಂದು ಘೋಷಿಸಿದ್ರು ಇದು ಭಿನ್ನಮತಕ್ಕೆ ಮತ್ತಷ್ಟು ತುಪ್ಪ ಸುರಿದ ಕ್ಷಣವಾಗಿತ್ತು, ಅಂದಿನಿಂದ ಬೂದಿ ಮುಚ್ಚಿದ್ದ ಈ ಭಿನ್ನಮತದ ಕಿಡಿ ಇದೀಗ ಸ್ಪೋಟಗೊಂಡು ಜಿಲ್ಲಾಬಿಜೆಪಿ ಅಧ್ಯಕ್ಷರಿಗೆ ಪದಾಧಿಕಾರಿಗಳು ರಾಜಿನಾಮೆ ನೀಡಿ ಹಾಲಾಡಿ ವಿರುದ್ದ ಪ್ರಚಾರ ಕೈಗೊಳ್ಳುವವರೆಗೆ ತಲುಪಿದೆ.

ಇದೀಗ ರಾಜಿನಾಮೆ ನೀಡಿದ ಪದಾಧಿಕಾರಿಗಳು ಹಾಲಾಡಿ ವಿರುದ್ಧ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದಾರೆ. ಬಿಜೆಪಿಯಲ್ಲಿ ಪಕ್ಷ ತೊರೆದು ಬಂದವರಿಗೆ ಮಾತ್ರ ಅವಕಾಶ ಸ್ಥಾನಮಾನದ ಹುದ್ದೆ ಸಿಗುತ್ತೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂದು ರಾಜಿನಾಮೆ ನೀಡಿದ್ದ ಮೂಲ ಬಿಜೆಪಿಗರು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಿನಲ್ಲಿ  ಪರದೆ ಹಿಂದೆಯಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಭಿನ್ನಮತ ಇದೀಗ ಸ್ಪೋಟಗೊಂಡಿದ್ದು ಈ ಮೂಲಕ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಈ ಪಕ್ಷದ ಪದಾಧಿಕಾರಿಗಳೇ ರಾಜಿನಾಮೆ ನೀಡಿ ಅಭ್ಯರ್ಥಿ ವಿರುದ್ದ ಕೆಲಸ ಮಾಡಲು ಹೊರಟಿರುವುದು ಪಕ್ಷಕ್ಕೆ ಅಡ್ಡಪರಿಣಾಮ ಆಗೋದ್ರಲ್ಲಿ ಎರಡು ಮಾತಿಲ್ಲ.