ಬೆಂಗಳೂರು : ಹಿರಿಯ ನಟ ದಿನೇಶ್ ಅವರ ಪುತ್ರ ಹಾಗೂ ದರ್ಶನ್ ನಟನೆಯ ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರದಲ್ಲಿ ಅಭಿನಯಿಸಿದ್ದ ನಟ ಗಿರಿ ದಿನೇಶ್ ಫೆ. 7ರ ಸಂಜೆ ನಿಧನರಾಗಿದ್ದಾರೆ.
ಅವರಿಗೆ 45 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಸಂಜೆ ಮನೆಯಲ್ಲಿ ದೇವರ ಪೂಜೆ ಮಾಡುವ ವೇಳೆ ದಿಡೀರ್ ಆಗಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು ಕಂಡಿದ್ದಾರೆ ಎನ್ನಲಾಗಿದೆ.
ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ವರದಿಯಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ. ಕನ್ನಡ ಸಿನಿಮಾದಲ್ಲಿ ಟ್ರೆಂಡ್ಸೆಟ್ಟರ್ ಆಗಿದ್ದ ನವಗ್ರಹ ಸಿನಿಮಾದಲ್ಲಿ 9 ಮಂದಿ ಖಳನಟರ ಪುತ್ರರು ನಟಿಸಿದ್ದರು. ಇದರಲ್ಲಿ ಹಿರಿಯ ಖಳನಟ ಹಾಗೂ ಹಾಸ್ಯನಟ ದಿನೇಶ್ ಅವರ ಪುತ್ರ ಗಿರಿ ಕೂಡ ಒಬ್ಬರಾಗಿದ್ದರು. ಆ ಬಳಿಕ ಅವರು ಚಮ್ಕಾಯ್ಸು ಚಿಂದಿ ಉಡಾಯ್ಸು , ವಜ್ರ ಸಿನಿಮಾದಲ್ಲಿಯೂ ನಟಿಸಿದ್ದರು. ಆ ನಂತರ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.