ಬಿಜೆಪಿ ಮೂರನೆ ಪಟ್ಟಿ. ಉಡುಪಿಗೆ ರಘುಪತಿ ಭಟ್, ಕಾಪುವಿಗೆ ಲಾಲಾಜಿ ಮೆಂಡನ್..
ಬಿಜೆಪಿ ಮೂರನೆ ಪಟ್ಟಿ. ಉಡುಪಿಗೆ ರಘುಪತಿ ಭಟ್, ಕಾಪುವಿಗೆ ಲಾಲಾಜಿ ಮೆಂಡನ್
ತೀವ್ರ ಕತೂಹಲ ಕೆರಳಿಸಿರುವ ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇಂದು ಸಂಜೆ ಬಿಜೆಪಿ ಪ್ರಕಟಿಸಿದೆ.
ಉಡುಪಿ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಹಾಲಿ ಸಚಿವ ಪ್ರಮೋದ್ ಮಧ್ವರಾಜ್ ಎದುರು ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಕಣಕ್ಕಿಳಿಸಿದೆ. ಶಾಸಕ ವಿನಯ ಕುಮಾರ್ ಸೊರಕೆ ಎದುರು ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರನ್ನು ಕಣಕ್ಕಿಳಿಸಿದೆ.
ಕಳೆದ ಬಾರಿಯ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಗುರ್ಮೆ ಸುರೇಶ್ ಶೆಟ್ಟಿ ವಿನಯ ಕುಮಾರ್ ಸೊರಕೆ ಅವರಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಕಾಪು ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಈ ಬಾರಿ ಬಿಜೆಪಿಯೂ ನಿರಾಸೆ ಮೂಡಿಸಿದೆ.
ಇನ್ನೊಂದೆಡೆಯಲ್ಲಿ ಚತುರ ಸಂಘಟಕ, ಯುವ ನಾಯಕ ಯಶ್‌ಪಾಲ್ ಸುವರ್ಣ ಅವರೂ ಕಾಪು ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಯಶ್‌ಪಾಲ್ ಬೆಂಬಲಿಗರು ಟಿಕೆಟ್ ನೀಡಬೇಕೆಂದು ಭಾರೀ ಪ್ರಚಾರ ನಡೆಸಿದ್ದರು.
ಕಳೆದ ಎರಡು ದಿನಗಳ ಹಿಂದೆ ರಘುಪತಿ ಭಟ್ ಅವರಿಗೆ ಉಡುಪಿಯಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಬೇಕೆಂದು ಅವರ ವಯೋವೃದ್ದ ತಾಯಿ ಸೇರಿದಂತೆ ನೂರಾರು ಅಭಿಮಾನಿಗಳು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಮಂಗಳೂರಿಗೆ ಸಂತೋಷ್ ಕುಮಾರ್ ರೈ, ಮಂಗಳೂರು ಉತ್ತರಕ್ಕೆ ಡಾ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವೇದವ್ಯಾಸ ಕಾಮತ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.
