ಮರಳು ಸಮಸ್ಯೆಯ ಉರುಳು ತೆಗೆಯಲು ಶತಪ್ರಯತ್ನ: ಶಾಸಕ ರಘುಪತಿಭಟ್

Featured, ಉಡುಪಿ, ಜಿಲ್ಲೆ
ಉಡುಪಿ: ಉದ್ಯಮಿ ಬಿ.ಆರ್‌ ಶೆಟ್ಟಿ ಅವರು 200 ಹಾಸಿಗೆಯ ಆಸ್ಪತ್ರೆಯನ್ನು ಸರ್ಕಾರಕ್ಕೆ ಕೊಡದ ಹೊರತು 400 ಹಾಸಿಗೆಯ ಖಾಸಗಿ ಆಸ್ಪತ್ರೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು. ಜಿಲ್ಲೆಯ ವೈದ್ಯಾಧಿಕಾರಿ ನೇತೃತ್ವದಲ್ಲಿಯೇ ಈಗಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಡೆಯಬೇಕು. ಈಗ ಇರುವ ವೈದ್ಯರು ಹಾಗೂ ಸಿಬ್ಬಂದಿಯೇ ಮುಂದುವರೆಯಬೇಕು. ನಗರದ ಹೃದಯಭಾಗದಲ್ಲಿರುವ ದುಬಾರಿ ಬೆಲೆಯ ಸರ್ಕಾರಿ ಜಾಗವನ್ನು ಬಿ.ಆರ್. ಶೆಟ್ಟಿ ಅವರಿಗೆ ನೀಡಲಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆ ನಡೆಸಲು ಬೇಕಾಗಿರುವ ಹೆಚ್ಚುವರಿ ಸಿಬ್ಬಂದಿ ಹಾಗೂ ಇತರೆ ಸೌಲಭ್ಯವನ್ನು ಒದಗಿಸಬೇಕು. ಅದರ ಉಸ್ತುವಾರಿಯನ್ನು ಜಿಲ್ಲಾ ವೈದ್ಯಧಿಕಾರಿ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೆ ಸರ್ಕಾರ ಹಾಗೂ ಬಿ.ಆರ್‌ ಶೆಟ್ಟಿ ಅವರು ಮಾಡಿಕೊಂಡ ಒಪ್ಪಂದದಲ್ಲಿ ಬದಲಾವಣೆ ಮಾಡಬೇಕು. ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗಬೇಕು. ಅದರಲ್ಲಿ ಜನಪ್ರತಿನಿಧಿಯೂ ಇರಬೇಕು. ಹಾಜಿ ಅಬ್ದುಲ್ಲಾ ಅವರ ಹೆರಿನಲ್ಲಿಯೇ ಜನರಿಗೆ ಸೇವೆ ನೀಡಬೇಕು. ಖಾಸಗಿ 400 ಹಾಸಿಗೆ ಆಸ್ಪತ್ರೆಗೆ ಯಾವ ಹೆಸರನ್ನು ಬೇಕಾದರೂ ಇಟ್ಟುಕೊಳ್ಳಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ ಅದರ ಆದರ ಕತೆಯೇ ಬೇರೆಯಾಗಿತ್ತು. ಕ್ಷೇತ್ರದ ಶಾಸಕನಾಗಿ ಆಸ್ಪತ್ರೆ ಉಳಿವಿಗಾಗಿ ಏನೆಲ್ಲಾ ಹೋರಾಟ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದರು.
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇರುವುದರಿಂದ ಅಭಿವೃದ್ಧಿಗೆ ಅಡಚಣೆಯಾಗಿದೆ. ಚುನಾವಣೆಯ ನೀತಿ ಸಂಹಿತೆ ಜೂನ್‌ 15ವರೆಗೆ ಇರುವುದರಿಂದ ಅಧಿಕಾರಿಗಳ ಜೊತೆ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಜೂನ್‌ನಿಂದ ಅಗಸ್ಟ್‌ ವರೆಗೆ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧವಿದೆ. ನಂತರ ದಿನದಲ್ಲಿ ಮರಳುಗಾರಿಗೆಯ ನೀತಿಯನ್ನು ಸರಳಗೊಳಿಸಲಾಗುತ್ತದೆ. ಅವೈಜ್ಞಾನಿಕವಾಗಿ ದೋಣಿಗೆ ಆಳವಡಿಸಲಾದ ಜಿಪಿಎಸ್‌ ತೆಗೆದು ಹಾಕುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದರು.