2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವು ಸೋಲದಿದ್ದರೆ ಕಾಶ್ಮೀರ ಸಮಸ್ಯೆ ಪರಿಹಾರ
ಇಸ್ಲಾಮಾಬಾದ್: ಬಿಜೆಪಿ 2004ರ ಲೋಕಸಭಾ ಚುನಾವಣೆಯಲ್ಲಿ ಸೋಲದಿದ್ದರೆ ಕಾಶ್ಮೀರ ಸಮಸ್ಯೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇತ್ಯರ್ಥಪಡಿಸುತ್ತಿದ್ದರು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸ್ಮರಿಸಿಕೊಂಡಿದ್ದಾರೆ.
ಅಲ್ಲದೇ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನೆದಿರುವ ಇಮ್ರಾನ್, 2004 ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕಾಶ್ಮೀರ ವಿಚಾರವನ್ನು ಬಗೆಹರಿಸುವುದಾಗಿ ಸಮ್ಮೇಳನವೊಂದರಲ್ಲಿ ತಮ್ಮ ಬಳಿ ಹೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಯುದ್ಧ ಒಂದೇ ಪರಿಹಾರವಲ್ಲಾ, ಉಭಯ ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ . ಮಾತುಕತೆ ಹೊರತುಪಡಿಸಿ ಬೇರೆ ಪರ್ಯಾಯ ಮಾರ್ಗಗಳ ಮೂಲಕ ಚರ್ಚೆ ಸಾಧ್ಯವಿಲ್ಲ ಎಂದು ಅವರು ವಿದ್ಯುನ್ಮಾನ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಎರಡು ಪರಮಾಣು ರಾಷ್ಟ್ರಗಳು ಯುದ್ಧ ಮಾಡಲು ಸಾಧ್ಯವಿಲ್ಲ. ನೆರೆಯ ಎಲ್ಲಾ ರಾಷ್ಟ್ರಗಳೊಂದಿಗೆ ಶಾಂತಿಯುತ ಒಪ್ಪಂದಕ್ಕೆ ಗಂಭೀರವಾಗಿ ಯೋಚಿಸಲಾಗುತ್ತಿದೆ. ಆದರೆ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಮಾತುಕತೆಗೆ ಸಿದ್ಧವಾಗಿಲ್ಲ ಎಂದು ಇಮ್ರಾನ್ ಖಾನ್ ಹೇಳಿದರು.


