3ನೇ ಏಕದಿನ ಪಂದ್ಯ: ಭಾರತಕ್ಕೆ 7ವಿಕೆಟ್ ಗಳ ಭರ್ಜರಿ ಜಯ – Vishwanews24

Featured, ಕ್ರೀಡೆ

ಬೇ ಓವಲ್‌:  ನ್ಯೂಝಿಲೆಂಡ್ ವಿರುದ್ಧ ಮೂರನೇ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಗಳಿಸಿದ್ದು, ಐದು ಪಂದ್ಯಗಳ ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆ 3-0 ಅಂತರದಿಂದ ವಶಪಡಿಸಿಕೊಂಡಿದೆ.

ಗೆಲುವಿಗೆ 244 ರನ್ ಗಳ ಸವಾಲನ್ನು ಪಡೆದ ಭಾರತ 43 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 245 ರನ್ ಗಳಿಸಿತು.

ನಾಯಕ ವಿರಾಟ್ ಕೊಹ್ಲಿ 60ರನ್, ಉಪ ನಾಯಕ ರೋಹಿತ್ ಶರ್ಮಾ 62 ರನ್, ಶಿಖರ್ ಧವನ್ 28ರನ್, ಅಂಬಟಿ ರಾಯುಡು ಔಟಾಗದೆ 40 ರನ್ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಔಟಾಗದೆ 38 ರನ್ ಗಳಿಸಿದರು.

ಶಿಖರ್ ಧವನ್ ವಿಕೆಟ್ ಉರುಳುತ್ತಿದ್ದಂತೆ ಮೈದಾನಕ್ಕಿಳಿದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ ಜೊತೆಗೂಡಿ ಕಿವೀಸ್ ಬೌಲರ್‍ಗಳನ್ನು ದಂಡಿಸುವ ಮೂಲಕ ಬೌಂಡರಿಗಳ ಸುರಿಮಳೆಗೆರೆದರು.

ಈ ಜೋಡಿಯನ್ನು ಬೇರ್ಪಡಿಸಲು ಕಿವೀಸ್ ನಾಯಕ ಕೇನ್ ವಿಲಿಯಮ್ಸ್ ಮಾಡಿದ ತಂತ್ರಗಳೆಲ್ಲ ತಲೆಕೆಳಗಾಯಿತು. ಈ ನಡುವೆ ರೋಹಿತ್ ಶರ್ಮ 3 ಬೌಂಡರಿ ಹಾಗೂ 2 ಸಿಕ್ಸರ್‍ಗಳಿಂದ 63 ರನ್‍ಗಳನ್ನು ಸಿಡಿಸಿ ಸೆನೆಟರ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರೆ ನಾಯಕ ವಿರಾಟ್ ಕೊಹ್ಲಿ ಕೂಡ 60 ರನ್ ಸಿಡಿಸಿ ಬೋಲ್ಟ್ ಬೌಲಿಂಗ್‍ನಲ್ಲಿ ಔಟಾದರೂ ಕೂಡ ಭಾರತದಿಂದ ಗೆಲುವನ್ನು ಕಸಿದುಕೊಳ್ಳದಂತೆ ಅಂಬಾಟಿ ರಾಯ್ಡು ಹಾಗೂ ದಿನೇಶ್ ಕಾರ್ತಿಕ್ ಜವಾಬ್ದಾರಿಯನ್ನು ಹೊತ್ತುಕೊಂಡರು.

ಈ ಜೋಡಿಯು ಕೂಡ ನ್ಯೂಜಿಲೆಂಡ್‍ನ ಬೌಲರ್‍ಗಳೆದುರು ಬೌಂಡರಿಗಳ ಸುರಿಮಳೆಗೈಯ್ಯುವ ಮೂಲಕ 43 ಓವರ್‍ಗಳಲ್ಲೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ದಿನೇಶ್ ಕಾರ್ತಿಕ್ 38 ರನ್ ಗಳಿಸಿದರೆ ರಾಯ್ಡು 40 ರನ್ ಗಳಿಸಿ ಅಜೇಯರಾಗಿ ಉಳಿದರು.