400 ವರ್ಷಗಳ ಬಳಿಕ ಆಗಸದಲ್ಲಿ ಇಂದು ಗುರು ಶನಿ ಮಹಾಸಂಗಮ -Vishwanews24
400 ವರ್ಷಗಳ ಬಳಿಕ ಆಗಸದಲ್ಲಿ ಇಂದು ಗುರು ಶನಿ ಮಹಾಸಂಗಮ -Vishwanews24
ಬೆಂಗಳೂರು:. 400 ವರ್ಷಗಳ ನಂತರ ಅಚ್ಚರಿ ಆಕಾಶದಲ್ಲಿ ನಡೆಯಲಿದೆ. ಖಗೋಳವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನವಿದು. ಅದೇನೆಂದರೆ, ಗುರು ಮತ್ತು ಶನಿಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿದ್ದು, ಇದನ್ನು ವಿಜ್ಞಾನಿಗಳು ‘ಮಹಾ ಸಂಯೋಗ’ ಎಂದೇ ಕರೆದಿದ್ದಾರೆ.
ಅಂದಹಾಗೆ ಗುರು ಮತ್ತು ಶನಿ ಗ್ರಹಗಳು ಡಿಸೆಂಬರ್ 13ರಿಂದಲೇ ಸಮೀಪಿಸುತ್ತಿವೆ. ಅದರ ಅಂತರ ಇಂದು ಅತ್ಯಂತ ಕಡಿಮೆಯಾಗಿದ್ದು, ಅಂಥ ಅಪೂರ್ವ ನೋಟವನ್ನು ಎಲ್ಲರೂ ಕಣ್ತುಂಬಿಸಿಕೊಳ್ಳಬಹುದಾಗಿದೆ. ಏಕೆಂದರೆ ನಾಳೆಯಿಂದ ಮತ್ತೆ ಈ ಎರಡೂ ಗ್ರಹಗಳು ದೂರ ದೂರ ಸರಿಯಲು ಆರಂಭಿಸುತ್ತವೆ.
ಶನಿ ಗ್ರಹದ ಕೆಳಗಡೆಗಳಲ್ಲಿ ಗುರುಗ್ರಹ ಕಾಣಿಸಿಕೊಳ್ಳಲಿದೆ. ನಾಳೆಯಿಂದ ಮತ್ತೆ ಪಥ ಬದಲಿಸುವ ಈ ಎರಡೂ ಗ್ರಹಗಳು ಉಲ್ಟಾ ಕಾಣಿಸಲಿವೆ. ಅಂದರೆ ಗುರುಗ್ರಹ ಮೇಲುಗಡೆ ಹಾಗೂ ಶನಿಗ್ರಹ ಕೆಳಗೆ ಆಗಲಿದೆ.
‘ಈ ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುತ್ತಿರುತ್ತವೆ. ಆದ್ದರಿಂದ ಎರಡೂ ಗ್ರಹಗಳು ಇದೀಗ ಪರಸ್ಪರ ಹಾದುಹೋಗಲಿವೆ. ಈ ಎರಡೂ ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗಲಿವೆ. ಆದರೆ, ಈ ಬಾರಿ ಗುರು ಮತ್ತು ಶನಿ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿರುವ ಕಾರಣ, ಇಂಥದ್ದೊಂದು ವಿದ್ಯಮಾನ ನಡೆಯಲಿದೆ ಎಂದಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವಿಜ್ಞಾನಿಗಳು, ಇಂದು ನೀವು ಇದನ್ನು ನೋಡಲು ಮಿಸ್ ಮಾಡಿಕೊಂಡರೆ ಮತ್ತೆ ನೀವು 60 ವರ್ಷ ಕಾಯಬೇಕು ಎಂದಿದ್ದಾರೆ.
ಭೂಮಿಯಿಂದ ಸೂರ್ಯನಿಗಿರುವ ದೂರದ 5ರಷ್ಟು ದೂರದಲ್ಲಿ ಗುರುಗ್ರಹ ವಿದ್ದು ಇದು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷಗಳು ಬೇಕು. ಹಾಗೆಯೇ ಶನಿಯು, ಭೂಮಿ ಹಾಗು ಸೂರ್ಯನ ಅಂತರದ ಎರಡರಷ್ಟು ಅಂತರವಿದ್ದು, ಪರಿಭ್ರಮಿಸಲು 29.46 ವರ್ಷಗಳನ್ನು ತೆಗುದುಕೊಳ್ಳುತ್ತದೆ. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು. ಆದ್ದರಿಂದ ಈ ಗ್ರಹಗಳ ಯುತಿಯನ್ನು ಸಮಾಗಮ ಎಂದು ಕರೆಯಲಾಗುತ್ತದೆ.
ಈ ಜೋಡಿ ಕೇವಲ 1 ಗಂಟೆ 45 ನಿಮಿಷಗಳಷ್ಟು ಮಾತ್ರ ಕಾಣಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8 ಗಂಟೆಯ ವರೆಗೆ ಕಂಡು, ನಂತರ ನೈರುತ್ಯದಲ್ಲಿ 8 ಗಂಟೆಗೆ ಅಸ್ತವಾಗುತ್ತದೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಡಿ.21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆಯನ್ನು ಆಯೋಜಿಸಲಾಗಿದೆ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
