ಅಕ್ರಮವಾಗಿ ಮರ ಕಡಿತ : ತಪ್ಪಿತಸ್ಥ ಹೆದ್ದಾರಿ ಅಧಿಕಾರಿಗಳನ್ನು ಶೀಘ್ರವೇ ಬಂಧಿಸಬೇಕು : ಪರಿಸರವಾದಿಗಳ ಒತ್ತಾಯ -Vishwanews24
ಉಡುಪಿ: ರಾಷ್ಟ್ರೀಯ ಹೆದ್ದಾರಿ 169(ಎ)ರ ಪರ್ಕಳ ದೇವಿನಗರದಿಂದ ಆದಿಉಡುಪಿ ಕರಾವಳಿ ಜಂಕ್ಷನ್ವರೆಗಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಅಕ್ರಮವಾಗಿ ಕೆಲವೊಂದು ಮರಗಳನ್ನು ಕಡಿದು ಹಾಕಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆಯಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕ್ರಮಕೈಗೊಳ್ಳಬೇಕಾಗಿರುವುದರಿಂದ ಬುಧವಾರ ಕುಂದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಪರಿಸರ ಪ್ರೇಮಿ ಬಾಲಕೃಷ್ಣ ಮದ್ದೋಡಿ ನೇತೃತ್ವದಲ್ಲಿ ಅಹವಾಲು ಸಲ್ಲಿಸಲಾಯಿತು.
ಪರಿಸರವಾದಿ ರತ್ನಾಕರ ಇಂದ್ರಾಳಿ ಅವರು ಮಾತನಾಡಿ, ವಲಸೆ ಹಕ್ಕಿಗಳ ವಾಸಸ್ಥಾನಕ್ಕೆ ಕೊಡಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ 140 ಮರಗಳನ್ನು ಕಡಿಯಲು ಉದ್ದೇಶಿಸಿದ್ದು, ಇದರಿಂದ ಪ್ರತಿವರ್ಷ ಹೊರ ದೇಶಗಳಿಂದ ಮಣಿಪಾಲಕ್ಕೆ ವಲಸೆ ಬರುತ್ತಿದ್ದ ಹಕ್ಕಿಗಳಿಗೂ ಅಪಾಯ ಎದುರಾಗಿದೆ. ವಲಸೆ ಬರುವ ವಿವಿಧ ಪ್ರಬೇಧದ ಪಕ್ಷಿಗಳು ಮಣಿಪಾಲದ ರಾಷ್ಟ್ರೀಯ ಹೆದ್ದಾರಿಯ ಇಕ್ಕೇಲಗಳಲ್ಲಿರುವ ಮರಗಳಲ್ಲಿ ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಆದರೆ ಇದೀಗ ಈ ಮರಗಳು ಕೂಡ ಕಡಿಯುವ ಪಟ್ಟಿಯಲ್ಲಿರುವುದರಿಂದ ವಲಸೆ ಪಕ್ಷಿಗಳಿಗೆ ವಾಸವೇ ಇಲ್ಲವಾಗಲಿದೆ. ಆದ್ದರಿಂದ ಮರಗಳ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.
ಅಧಿಕಾರಿ ಲೋಹಿತ್ ಅವರು, ಅರಣ್ಯ ಇಲಾಖೆಯಿಂದ ಯಾವುದೇ ಮರಗಳನ್ನು ಕಡಿಯಲು ಈವರೆಗೆ ಅನುಮತಿ ನೀಡಿಲ್ಲ. ಅನುಮತಿ ಇಲ್ಲದೆ ಮರ ಕಡಿದಿರುವುದರಿಂದ ಇದು ಅಕ್ರಮವಾಗುತ್ತದೆ ಎಂದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪರಿಸರವಾದಿಗಳು, ರಾಷ್ಟ್ರೀಯ ಹೆದ್ದಾರಿಯವರು ಎಷ್ಟು ಮರಗಳನ್ನು ಹೀಗೆ ಅಕ್ರಮವಾಗಿ ಕಡಿದಿದ್ದಾರೆ ಮತ್ತು ಆ ಮರಗಳನ್ನು ಎಲ್ಲಿಗೆ ಸಾಗಿಸಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಇದು ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಈ ಕುರಿತು ಇಲಾಖಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಪ್ರಭಾರ ಉಡುಪಿ ವಲಯ ಅರಣ್ಯಾಧಿಕಾರಿ ಎ.ಎ.ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
