ಅತೃಪ್ತ ಕಾಂಗ್ರೆಸ್ ಮುಖಂಡರು ಬಿ.ಎಸ್.ವೈ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ – Vishwanews24
ಕೋಲಾರ:ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ಸಮ್ಮುಖದಲ್ಲೇ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಸಂಸದ ಕೆ.ಎಚ್ ಮುನಿಯಪ್ಪನವರಿಗೆ ಭಾರೀ ಹಿನ್ನಡೆಯಾಗಿದೆ. ಅಲ್ಲದೇ ಬಿಜೆಪಿಯೂ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಮುಂದಾಗಿತ್ತು. ಬಿಎಸ್ವೈ ನಿರೀಕ್ಷೆಯಂತೆಯೇ ಅತೃಪ್ತ ಕಾಂಗ್ರೆಸ್ ಮುಖಂಡರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕೆ.ಎಚ್ ಮುನಿಯಪ್ಪ ಅವರ ವಿರುದ್ಧ ಸದಾ ಕತ್ತಿ ಮಸೆಯುತ್ತಿದ್ದ ಕಾಂಗ್ರೆಸ್ಸಿನ ಸ್ಥಳೀಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಬಾಜಾಚಿ ಚನ್ನಯ್ಯ ಮತ್ತು ಬಿ.ಪಿ ಮುನಿವೆಂಕಟಪ್ಪ ಎಂಬುವರು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲೇ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ಧಾರೆ. ಬಿ.ಎಸ್ ಯಡಿಯೂರಪ್ಪನವರ ಸಮ್ಮುಖದಲ್ಲೇ ಸೇರ್ಪಡೆಯಾಗಿದ್ದು, ಸಂಸದ ಮುನಿಯಪ್ಪ ಅವರನ್ನು ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ಧಾರೆ.
ಕಳೆದ 7 ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಸೋಲುಣಿಸಿರುವ ಮುನಿಯಪ್ಪ ಜಿಲ್ಲೆಯನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದಾರೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲನುಭವಿಸಿರುವ ಮುನಿಯಪ್ಪ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಜಯಗಳಿಸಿಲ್ಲ.
ಕೆಎಚ್ ಮುನಿಯಪ್ಪನವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಸಂಸದರನ್ನು ಸೋಲಸಬೇಕೆಂಬ ಪಣ ತೊಟ್ಟಿದ್ದೇವೆ. ಈಗಾಗಲೇ ಇದಕ್ಕೆ ಸಿದ್ಧತೆ ನಡೆಸಿಕೊಂಡಿದ್ದೇವೆ ಎಂದು ಬಿಜೆಪಿ ಸೇರಿದ ಕಾಂಗ್ರೆಸ್ ಅತೃಪ್ತ ಮುಖಂಡರು ಹೇಳಿದ್ದಾರೆ.

