ಆ.10ರಂದು ಮಧ್ಯಾಹ್ನ 3 ಗಂಟೆಗೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಕರೊನಾ ಆತಂಕದ ನಡುವೆಯೂ 2019-20ನೇ ಸಾಲಿನ ಎಸ್​ಎಸ್ಎಲ್​ಸಿ ಪರೀಕ್ಷೆ ಬರೆದಿದ್ದ ಸುಮಾರು 8.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಇನ್ನು ಮೂರು ದಿನದಲ್ಲಿ ಹೊರ ಬೀಳಲಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಆಗಸ್ಟ್ 10ರಂದು ಮಧ್ಯಾಹ್ನ 3ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದೆ. ಅಂದು karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮೂಲಕವೂ ಪರೀಕ್ಷೆಯ ಫಲಿತಾಂಶ ದೊರೆಯಲಿದೆ ಎಂಬುದಾಗಿ ತಿಳಿಸಿದ್ದಾರೆ.

ಆ.8ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ಸುದ್ದಿ ನಿನ್ನೆ(ಗುರುವಾರ) ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಚಿವ ಸುರೇಶ್​ ಕುಮಾರ್​, ಫಲಿತಾಂಶ ಪ್ರಕಟ ಯಾವಗ ಎಂಬುದು ಇನ್ನೂ ನಿಶ್ಚಯವಾಗಿಲ್ಲ ಎಂದಿದ್ದರು. ಇದೀಗ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದ್ದು, ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟ ಎನಿಸಿಕೊಂಡಿರುವ ಎಸ್​ಎಸ್ಎಲ್​ಸಿ ಫಲಿತಾಂಶ ಮುಂದಿನ ಸೋಮವಾರ(ಆ.10) ಪ್ರಕಟವಾಗಲಿದೆ.