ಆಡಳಿತ ನಡೆಸುವ ಯೋಗ್ಯತೆ ಇಲ್ಲವಾದರೆ ನಾವು ಆಡಳಿತ ನಡೆಸುತ್ತೇವೆ : ಮೈತ್ರಿ ಸರ್ಕಾರದ ವಿರುದ್ಧ ಬಿಎಸ್ ವೈ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: “ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲು ಬಿಡಲ್ಲ. ಯೋಗ್ಯತೆ ಇದ್ದರೆ ಆಡಳಿತ ನಡೆಸಲಿ. ಇಲ್ಲವಾದರೆ ನಾವು ಆಡಳಿತ ನಡೆಸುತ್ತೇವೆ,” ಎಂದು ಮಾಜಿ ಸಿಎಂ ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಂತರ ಚುನಾವಣೆ ಆಗುತ್ತದೆ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಬಿಎಸ್​ವೈ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಧ್ಯಂತರ ಚುನಾವಣೆ ಆಗಲು ನಾವು ಬಿಡಲ್ಲ ಎಂದರು. ಯೋಗ್ಯತೆ ಇದ್ದರೆ ಆಡಳಿತ ಮಾಡಲಿ, ಇಲ್ಲವಾದರೆ ಬಿಟ್ಟುಹೋಗಲಿ ಎಂದು ನೇರಾನೇರಾ ವಾಗ್ದಾಳಿ ನಡೆಸಿದರು.

” ನಾವು 105 ಮಂದಿ ಬಿಜೆಪಿ ಶಾಸಕರಿದ್ದೇವೆ. ದೇವೇಗೌಡರು ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್​ನವರು ಮಧ್ಯಂತರ ಚುನಾವಣೆ ಬೇಡ ಎನ್ನುತ್ತಿದ್ದಾರೆ. ಚುನಾವಣೆ ನಡೆದರೆ ಜನರಿಗೆ ಹೊರೆಯಾಗುತ್ತದೆ,” ಎಂದು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್, ಜೆಡಿಎಸ್​ನ ಹೇಳಿಕೆಗಳು ಗೊಂದಲದ ಗೂಡಾಗಿದೆ. ಮನಸ್ಸಿಗೆ ಬಂದಂತೆ ಮಾತಾಡಿ ಗೊಂದಲ ಸೃಷ್ಟಿಸಬಾರದು. ಒಂದೇ ವರ್ಷದಲ್ಲಿ ಮತ್ತೊಂದು ಚುನಾವಣೆಗೆ ನಾವು ಹಾಗೂ ಜನತೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್​​ನವರು ಮಧ್ಯಂತರ ಚುನಾವಣೆ ಬೇಡ ಎಂದರೆ, ದೇವೇಗೌಡರು ಮಧ್ಯಂತರ ಚುನಾವಣೆ ಅಂತಾರೆ. ಮಧ್ಯಂತರ ಚುನಾವಣೆಯಿಂದ ಜನರಿಗೆ ಮತ್ತೆ ಹೊರೆ ಆಗಲಿದೆ. ಹೀಗಾಗಿ ನಾವು ಮಧ್ಯಂತರ ಚುನಾವಣೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.