ಆಡಿದ ಮಾತಿಗೆ ಬದ್ಧನಾಗಿರಬೇಕಾಗಿರುವುದು ಉತ್ತಮ ನಾಯಕನ ಲಕ್ಷಣ : ಪ್ರಧಾನಿಗೆ ದಿನೇಶ್ ಗುಂಡುರಾವ್ – Vishwnaews24
ಮೋದಿಯವರ ಮಾತನ್ನು ನಂಬಲು ದೇಶದ ಯುವಕರು ಮೂರ್ಖರಲ್ಲ..
ಮೋದಿ ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ED,CBI ಮತ್ತು ITಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ..
ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ?..
ದೇಶದಲ್ಲಿರುವುದು ಹಿಟ್ಲರ್ನ ಆಡಳಿತವೋ? ಅಥವಾ ಪ್ರಜಾಪ್ರಭುತ್ವದ ಆಡಳಿತವೋ ?
ಬೆಂಗಳೂರು: “ಉದ್ಯೋಗ ಕೇಳಿದ ಯುವಕರಿಗೆ ಪಕೋಡಾ ಮಾರಲು ಹೇಳಿದ್ದ ಪ್ರಧಾನಿ ಮೋದಿ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಕೊಡುವುದಾಗಿ ಹೇಳಿದ್ದಾರೆ.ಆದರೆ ಮೋದಿಯವರ ಈ ಮಾತನ್ನು ನಂಬಲು ದೇಶದ ಯುವಕರು ಇಂದು ಮೂರ್ಖರಲ್ಲ” ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
“ಬಿಜೆಪಿ ಸರ್ಕಾರದ ಧೋರಣೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು ಸರಣಿ ಟ್ವೀಟ್ ಮಾಡಿದ್ದು, ಸರ್ಕಾರ ಫ್ಯಾಸಿಸ್ಟ್ ಧೋರಣೆಯಿಂದ ಸರ್ವಾಧಿಕಾರಿಯಾಗಿದೆ. ಫ್ಯಾಸಿಸ್ಟ್ಗಳು ವಿರೋಧವನ್ನು ಹತ್ತಿಕ್ಕುವುದೇ ಧಮನಕಾರಿ ನಡೆಯ ಮೂಲಕ. ಮೋದಿ ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ED,CBI ಮತ್ತು ITಯನ್ನು ದುರ್ಬಳಕೆ ಮಾಡಿಕೊಂಡಿದಲ್ಲದೆ, ಈಗ ವಿರೋಧಿಗಳನ್ನು ಹಣಿಯಲು ದೆಹಲಿ ಪೊಲೀಸರನ್ನು ಕೂಡ ಗೂಂಡಾಗಳಾಗಿ ಪರಿವರ್ತಿಸಿದೆ” ಎಂದು ಆರೋಪಿಸಿದ್ದಾರೆ
“ಕೇಂದ್ರದ ಗೃಹ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ದೆಹಲಿ ಪೊಲೀಸರು ಅಮಿತ್ ಶಾ ಹುಕುಂ ಪಾಲಿಸುವ ಅಡಿಯಾಳುಗಳಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೇ ಪಕ್ಷದ ಕಚೇರಿಗೆ ಹೋಗಲು ದೆಹಲಿ ಪೊಲೀಸರು ಅವಕಾಶ ನೀಡುವುದಿಲ್ಲವೆಂದರೆ ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ? ದೇಶದಲ್ಲಿರುವುದು ಹಿಟ್ಲರ್ನ ಆಡಳಿತವೋ? ಅಥವಾ ಪ್ರಜಾಪ್ರಭುತ್ವದ ಆಡಳಿತವೋ” ಎಂದು ಪ್ರಶ್ನಿಸಿದ್ದಾರೆ.
“ಆಡಿದ ಮಾತಿಗೆ ಬದ್ಧನಾಗಿರಬೇಕಾಗಿರುವುದು ಉತ್ತಮ ನಾಯಕನ ಲಕ್ಷಣ.ಆದರೆ ಮೋದಿಯವರದ್ದು ಆಡುವುದೇ ಒಂದು, ಮಾಡುವುದೇ ಇನ್ನೊಂದು ಎಂಬಂತಾಗಿದೆ. ಮೋದಿಯವರಿಗೆ ಆತ್ಮಸಾಕ್ಷಿಯಿದ್ದರೆ ತಾವು ಆಡಿರುವ ಮಾತುಗಳ ವಿಡಿಯೋ ಕ್ಲಿಪ್ಪಿಂಗ್ ನೋಡಲಿ. ಆಗಲೂ ತಮ್ಮ ಮೇಲೆ ತಮಗೇ ಅಸಹ್ಯಭಾವ ಮೂಡದಿದ್ದರೆ ಅವರ ಆತ್ಮಸಾಕ್ಷಿ ಸತ್ತು ಹೋಗಿದೆ ಎಂದೇ ಅರ್ಥ “ಎಂದು ಹೇಳಿದ್ದಾರೆ.
