ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ ವಕೀಲ ಜಗದೀಶ್ – Vishwanews24
ಇನ್ಮುಂದೆ ನನಗೂ, ಆದ್ಮಿ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ..
ಬೆಂಗಳೂರು, : ಕೆಲವು ತಿಂಗಳುಗಳ ಹಿಂದೆಯಷ್ಟೇ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದ ವಕೀಲ ಜಗದೀಶ್ ಕೆ.ಎನ್. ಇಂದು (ಗುರುವಾರ) ಪಕ್ಷಕ್ಕೆ ದಿಢೀರ್ ಆಗಿ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ವಕೀಲ ಜಗದೀಶ್ ಕೆ.ಎನ್, “ಆಮ್ ಆದ್ಮಿ ಪಕ್ಷಕ್ಕೆ ಸೇರಿ ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
ಇಂದು ಅಧಿಕೃತವಾಗಿ ಆಮ್ ಆದ್ಮಿ ಪಕ್ಷ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಕರ್ನಾಟಕ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರಿಗೆ ತಲುಪಿಸಿದ್ದೇನೆ,” ಎಂದರು.
“ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳಿಗೂ ಈ ವಿಷಯ ಹೇಳುತ್ತಿದ್ದೇನೆ. ನನ್ನ ರಾಜೀನಾಮೆ ತಕ್ಷಣದಿಂದ ಕಾರ್ಯರೂಪಕ್ಕೆ ಬರಲಿದ್ದು, ಇನ್ಮುಂದೆ ನನಗೂ, ಆದ್ಮಿ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ,” ಎಂದು ವಿಡಿಯೋ ಹೇಳಿಕೆಯಲ್ಲಿ ವಕೀಲ ಜಗದೀಶ್ ಕೆ.ಎನ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಸಂದರ್ಭದಲ್ಲಿ “ಅಭಿವೃದ್ಧಿಪರ ಆಡಳಿತ ನೀಡಲು ವಿಫಲವಾಗಿರುವ ಹಾಗೂ ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ರಾಜ್ಯವನ್ನು ಕಾಪಾಡಲು ಆಮ್ ಆದ್ಮಿ ಪಾರ್ಟಿಯ ಅವಶ್ಯಕತೆ ರಾಜ್ಯಕ್ಕಿದೆ,” ಎಂದು ಖ್ಯಾತ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಎನ್. ಜಗದೀಶ್ ಮಹಾದೇವ್ ಹೇಳಿದ್ದರು.
