ಆರ್ಎಸ್ಎಸ್ ಬ್ಯಾನ್ ಬಗ್ಗೆ ಯಾರೊಬ್ಬರೂ ಹೇಳಿಕೆ ನೀಡಿಲ್ಲ , ಚರ್ಚೆಯೂ ನಡೆದಿಲ್ಲ: ಸಚಿವ ದಿನೇಶ್ ಗುಂಡೂರಾವ್ – vishwanews24
ಆರ್ಎಸ್ಎಸ್ ಬ್ಯಾನ್ ಬಗ್ಗೆ ಯಾರೊಬ್ಬರೂ ಹೇಳಿಕೆ ನೀಡಿಲ್ಲ ಚರ್ಚೆಯೂ ನಡೆದಿಲ್ಲ: ಸಚಿವ ದಿನೇಶ್ ಗುಂಡೂರಾವ್
ಚಿತ್ರದುರ್ಗ: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಘಟನೆಯ ಬ್ಯಾನ್ ಯಾರೊಬ್ಬರೂ ಹೇಳಿಕೆ ನೀಡಿಲ್ಲ. ಈ ಬಗ್ಗೆ ಚರ್ಚೆಗಳನ್ನೂ ಮಾಡಲಾಗಿಲ್ಲ. ಕೇವಲ ಸರ್ಕಾರಿ ಜಾಗಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಡೆಸದಂತೆ ಕ್ರಮವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮದಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ಬ್ಯಾನ್ ಮಾಡಬೇಕು ಎಂದು ಯಾರಾದರೂ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಸಚಿವರು, ಆ ಬಗ್ಗೆ ಯಾರೂ ಹೇಳಿಲ್ಲ, ಚರ್ಚೆಯೇ ಮಾಡಿಲ್ಲ ಎಂದು ಖಚಿತಪಡಿಸಿದರು. ಸಂವಿಧಾನದ ಅನ್ವಯ ಎಲ್ಲರಿಗೂ ಮುಕ್ತವಾದ ಅವಕಾಶವಿದೆ. ಆದರೆ, ಆರ್.ಎಸ್.ಎಸ್. ಒಂದು ರಾಜಕೀಯ ಸಂಘಟನೆ ಎಂಬ ಬಗ್ಗೆ ಸಂದೇಹವಿಲ್ಲ ಎಂದ ಅವರು, ಈ ಕಾರಣಕ್ಕೆ ಸರ್ಕಾರಿ ಸ್ಥಳ, ಶಾಲೆಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಡೆಸಬಾರದು ಎಂದು ಒತ್ತಿ ಹೇಳಿದರು.
ಶಾಲೆ, ಕಾಲೇಜುಗಳಲ್ಲಿ ರಾಜಕೀಯವನ್ನು ತರುವುದು ಸರಿಯಲ್ಲ. ಯಾವುದೇ ಸಂಸ್ಥೆಯಾಗಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಳ್ಳಬೇಕು ಮತ್ತು ಅದನ್ನು ಆರ್.ಎಸ್.ಎಸ್. ಶಾಖೆಗಳಿಗಾಗಿ ಉಪಯೋಗಿಸಬಾರದು ಎಂದು ತಿಳಿಸಿದರು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ಸರ್ಕಾರಿ ಜಾಗವನ್ನು ಯಾರೂ ಬಳಸಬಾರದೆಂದು ಆದೇಶವಿತ್ತು. ಸರ್ಕಾರಿ ಜಾಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಶಾಲಾ-ಕಾಲೇಜು ಆವರಣಗಳಲ್ಲಿ ಯಾವುದೇ ರಾಜಕೀಯ ಸಂಘಟನೆಗಳ ಚಟುವಟಿಕೆಗೆ ಅವಕಾಶ ನೀಡಬಾರದು ಎಂಬುದು ಆದೇಶದ ಉದ್ದೇಶವಾಗಿದೆ ಎಂದರು.
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಪ್ರಮುಖ ಆರೋಪಿ ಉನ್ನಿಕೃಷ್ಣನ್ ಬಂಧನ – vishwanews24
