ಇತಿಹಾಸ ಪ್ರಸಿದ್ದ ಕಾಪು ಪಿಲಿಕೋಲ ಮೇ 5
ಕಾಪು: ತನ್ನದೇ ಆದ ವಿಶಿಷ್ಟ- ವೈಶಿಷ್ಟ್ಯತೆಗಳಿಂದಾಗಿ ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಹೆಸರುವಾಸಿಯಾಗಿರುವ ಕಾಪುವಿನಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಕಾಪುದ ಪಿಲಿಕೋಲವು ಮೇ 05 ರಂದು ನಡೆಯಲಿದೆ.
ಕಾಪುವಿನಲ್ಲಿ ನಡೆಯುವ ಪಿಲಿಕೋಲದ ಆರಾಧನಾ ಪದ್ಧತಿಯು ಇತರೆಡೆಗಳ ಭೂತಾರಾಧನೆಗಳಿಗಿಂತ ಭಿನ್ನವಾಗಿದೆ. ಪಿಲಿ ಕೋಲಕ್ಕೆ ದಿನ ನಿಗದಿ ಪಡಿಸುವುದರಿಂದ ಹಿಡಿದು ಕೋಲದ ಸಮಾಪನದವರೆಗೂ ನಡೆಯುವ ಆಚರಣಾ ಪದ್ಧತಿಗಳು ಧಾರ್ಮಿಕ ಮತ್ತು ಜನಪದಾಸಕ್ತರಲ್ಲಿ ಬಹಳಷ್ಟು ಕೌತುಕವನ್ನು ಮೂಡಿಸುತ್ತವೆ.
ಕಾರ್ಕಳದ ಅರಸನಾದ ಭೆೈರ ಸೂಡವ ರಾಜ್ಯಭಾರ ಮಾಡುತ್ತಿರುವ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲಾರದೇ ಸ್ವತಃ ತಾನೇ ಬೇಟೆಗಾಗಿ ಹೋದಾಗ ಎರಡು ಹುಲಿಗಳನ್ನು ಸೆರೆ ಹಿಡೆದು, ತನ್ನ ಅರಮನೆಗೆ ತಂದು ಪಂಜರದೊಳಗೆ ಹಾಕಿ, ತನ್ನ ಆಯಾಸ ನೀಗಿಸಿಕೊಳ್ಳಲು ಅಂತಃಪುರದಲ್ಲಿ ಮಲಗು ತ್ತಾನೆ. ಈ ಸಂದರ್ಭ ನಿದ್ರೆಯಲ್ಲಿ ತನ್ನ ಆರಾಧನಾ ದೇವತೆಯಾದ ಚಂಡಿಕಾ ದೇವಿಯು ಕಾಣಿಸಿಕೊಂಡು ರಾಜ ನೀನು ಹಿಡಿದು ತಂದಿರುವ ಹುಲಿಗಳು ಸಾಧಾರಣ ಹುಲಿಗಳಲ್ಲ. ಅವು ನನ್ನ ವಾಹನದ ಮಾಯಾ ಹುಲಿಗಳು, ಅವುಗಳನ್ನು ಸತ್ಕರಿಸಿ ಈಗ ತಾನೇ ತೆಂಕು ರಾಜ್ಯದಿಂದ ನಿನ್ನ ರಾಜ್ಯದ ಮೂಲಕವಾಗಿ ಬಡಗು ದಿಕ್ಕಿಗೆ ಗಂಗಾಸ್ನಾನ ಮಾಡಲು ತೆರಳುತ್ತಿರುವ ಸಾವಿರಮಾನಿ ದೈವಗಳ ಜೊತೆಗೆ ಎರಡೂ ಹುಲಿಗಳನ್ನು ಕಳುಹಿಸಿ ಬಿಡು ಎಂದು ನುಡಿಯುತ್ತಾಳಂತೆ.
ತತ್ಕ್ಷಣ ನಿದ್ರೆಯಿಂದ ಎಚ್ಚೆತ್ತ ರಾಜ ತಾನು ಬಂಧಿಸಿಟ್ಟಿದ್ದ ಹುಲಿಗಳನ್ನು ಮತ್ತು ಬಡಗು ದಿಕ್ಕಿಗೆ ತೆರಳುತ್ತಿದ್ದ ದೈವಗಳಿಗೆ ಸತ್ಕಾರಗಳನ್ನು ಮಾಡಿ ತೀರ್ಥಸ್ನಾನಕ್ಕೆ ಬೀಳ್ಕೊಡುತ್ತಾನೆ. ಹೀಗೆ ಹೋದ ದೈವಗಳು ಗಂಗಾಸ್ನಾನ ಮುಗಿಸಿ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಹಾಗೂ ಮಾರಿಯಮ್ಮ ದೇವರ ದೇವಿಯ ಸನ್ನಿಧಾನಕ್ಕೆ ಬಂದು ಈ ಪುಣ್ಯಕೇÒತ್ರದಲ್ಲಿಯೇ ತಮಗೆ ಸ್ಥಾನಮಾನ ಕೊಡಬೇಕೆಂದು ಕೇಳಿಕೊಂಡಾಗ ದೇವರ ಅಪ್ಪಣೆಯಂತೆ ಕೋಟಿ-ಚೆನ್ನಯರು ಪೊಯ್ಯ ಪೊಡಿಕಲ್ಲು ಎಂಬಲ್ಲಿಯೂ ಮುಗೇರ್ಕಳ, ಹುಲಿಚಂಡಿ, ತನ್ನಿಮಾನಿಗ ದೈವಗಳು ಪಲ್ಲತ್ತಪಡು³ ಶ್ರೀ ಮಾರಿಯಮ್ಮನ ಬಲಭಾಗದಲ್ಲಿಯೂ ನೆಲೆಯೂರುತ್ತಾರೆ ಎನ್ನುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.
ಎರಡು ವರ್ಷಗಳಿಗೊಮ್ಮ ನಡೆಯುವ ದ್ವೆ„ವಾರ್ಷಿಕ ಆಚರಣೆ : ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ನಡೆದ ವರ್ಷ ಕಾಪುವಿನಲ್ಲಿ ಪಿಲಿಕೋಲ ನಡೆಯುತ್ತದೆ. ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಇಲ್ಲಿನ ಪರಿವಾರ ಶಕ್ತಿಗಳ ಕೋಲವೂ ನಡೆಯುತ್ತದೆ. ಪಿಲಿಕೋಲದ ಮುಖ್ಯ ಹೊಣೆಗಾರಿಕೆ ಇಲ್ಲಿನ ಮಾರ ಗುರಿಕಾರ ವರ್ಗದವರದಾಗಿದ್ದು, ಕಾಪು ಪಡು ಗ್ರಾಮದ ಭೈರುಗುತ್ತು, ದೊರಕಲಗುತ್ತು ಮುಂತಾದ 16 ಕಾಣಿಕೆ ಮನೆ ಕುಟುಂಬದವರೂ ಪಿಲಿಕೋಲದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಪಿಲಿಕೋಲ ಆಚರಣಾ ವಿಧಾನ : ಇತಿಹಾಸ ಪ್ರಸಿದ್ಧವಾದ ಕಾಪುವಿನ ಪಿಲಿಕೋಲದಲ್ಲಿ ಭೂತ ನರ್ತಕ (ಪಿಲಿ ವೇಷಧಾರಿ) ಯಾರು ಎನ್ನುವುದು ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ನಿರ್ಧಾರವಾಗುತ್ತದೆ. ಪಿಲಿಕೋಲದ ಹಿಂದಿನ ದಿನ ಪಾತ್ರಧಾರಿಗೆ ವೀಳ್ಯ ಕೊಡುವ ಕಾರ್ಯ ನಡೆಯುತ್ತದೆ. ವೀಳ್ಯ ಪಡೆದ ಭೂತ ನರ್ತಕನನ್ನು ನಿರ್ದಿಷ್ಟವಾದ ಕಲ್ಲಿನಲ್ಲಿ ಕುಳ್ಳಿರಿಸಿ ಮೂರು ಕೊಡ ನೀರು ಸುರಿಯಲಾಗುತ್ತದೆ. ಆ ಬಳಿಕ ಪಿಲಿಕೋಲದ ಪಾತ್ರ
ಧಾರಿಯು ದೈವಸ್ಥಾನದ ಒಳಗೆ ಹೋಗಿ ಹೊಸ ಚಾಪೆಯಲ್ಲಿ ಮಲಗುತ್ತಾನೆ. ಮಾರ ಗುರಿಕಾರ ವರ್ಗದವರೂ ಅಲ್ಲೇ ಮಲಗುತ್ತಾರೆ. ಅನೇಕ ಸಂಪ್ರದಾಯಗಳೊಂದಿಗೆ ಸಿದ್ಧತೆಗಳನ್ನು ನಡೆಸಿದ ಬಳಿಕ ಸಂಪ್ರದಾಯದಂತೆ ಸ್ನಾನ ಮಾಡಿಸಿ ಬಣ್ಣಗಾರಿಕೆಗಾಗಿ ಒಲಿಮದೆ (ಒಲಿಗುಂಡ)ಯೊಳಗೆ ಕಳುಹಿಸಲಾಗುತ್ತದೆ. ಅಲ್ಲಿ ಮೈಯಿಡೀ ಹುಲಿಯ ಬಣ್ಣವನ್ನು ಬಳಿದ ನಂತರ ಪಿಲಿ ಭೂತದ ವೇಷಧಾರಿಯು ಪಠೇಲರ ಅನುಮತಿ ಪಡೆದು ಕೇವಲ ಸಿರಿ ಒಲಿಗಳಿಂದಲೇ ಸಿಂಗಾರಗೊಳ್ಳುವ ವಿಶೇಷ ಪಂಜರಗಳಿಂದ ಹೊರ ಬರುತ್ತಾನೆ.
ಹುಲಿ ಮುಟ್ಟಿದವರಿಗೆ ಕಂಟಕದ ಭೀತಿ?
ವಿಶೇಷವಾಗಿ ಅಲಂಕೃತವಾಗುವ ಸಿರಿ ಪಂಜರ ದೊಳಗಿಂದ ಹೊರ ಬಂದ ಹುಲಿ ವೇಷಧಾರಿಯು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದ ಬಳಿಕ ಅಲ್ಲೇ ನೆಡಲಾಗುವ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ತನ್ನ ಬೇಟೆಗಾಗಿ ಹೊರಡುತ್ತಾನೆ.
ಈ ಸಂದರ್ಭದಲ್ಲಿ ಹುಲಿಯ ಕೈಗೆ ಸಿಗುವುದರಿಂದ ತಪ್ಪಿಸಿ ಕೊಳ್ಳುವ ನಿಟ್ಟಿನಲ್ಲಿ ನೆರೆದಿರುವ ಸಹಸ್ರಾರು ಸಂಖ್ಯೆಯ ಭಕ್ತರು ಚದುರಿ ಓಡುತ್ತಾರೆ. ಹಿಂದಿನಿಂದಲೂ ಇಲ್ಲಿ ಹುಲಿ ಮುಟ್ಟಿದರೆ ಸಾಯುತ್ತಾರೆಂಬ ನಂಬಿಕೆ ಇರುವುದರಿಂದ ಇಲ್ಲಿನ ಪಿಲಿ ಕೋಲದ ಬಗ್ಗೆ ಜನರಲ್ಲಿ ಬಹಳಷ್ಟು ಭಯವೂ ಇರುತ್ತದೆ.
ಹುಲಿಯು ನಿರ್ದಿಷ್ಟ ಪ್ರದೇಶದಲ್ಲಿ ಸಂಚರಿಸುವಾಗ ಅಥವಾ ಸುತ್ತಾಡುವಾಗ ಯಾರನ್ನು ಮುಟ್ಟಲ್ಪಡುತ್ತದೆಯೋ ಆತ ಮುಂದಿನ ಕೋಲದೊಳಗೆ ಸಾಯುತ್ತಾನೆ ಅಥವಾ ಕಂಟಕಕ್ಕೆ ಗುರಿಯಾಗುತ್ತಾನೆ ಎಂಬ ನಂಬಿಕೆಯಿದೆ. ಯಾರನ್ನೂ ಮುಟ್ಟದೇ ಹೋದಲ್ಲಿ ಕೋಲದ ಪಾತ್ರಧಾರಿಯೇ ಸಾವಿಗೆ ಗುರಿಯಾಗುತ್ತಾನೆ ಎಂಬ ಮಾತುಗಳೂ ಇವೆ. ಹುಲಿಯು ಬೇಟೆಯ ವೇಳೆಯಲ್ಲಿ ಯಾರನ್ನಾದರೂ ಮುಟ್ಟಿದಲ್ಲಿ ತತ್ಕ್ಷಣ ದೈವಸ್ಥಾನಕ್ಕೆ ಬಂದು ವಿಜಯದ ಆಚರಣೆಯಲ್ಲಿ ತೊಡಗುತ್ತದೆ. ಆ ಬಳಿಕ ಮತ್ತೆ ಬೇಟೆಗಿಳಿಯುತ್ತದೆ. ಮಧ್ಯಾಹ್ನ 1 ಗಂಟೆಯಿಂದ 5 ಗಂಟೆಯವರೆಗೆ ನಡೆಯುವ ಹುಲಿ ಕೋಲವನ್ನು ಹುಲಿ ಸಂಚರಿಸದ (ಬಾರದ) ನಿರ್ದಿಷ್ಟ ಜಾಗದಲ್ಲಿ ನಿಂತು ವೀಕ್ಷಿಸುತ್ತಾರೆ.
ಐದು ಗಂಟೆಯ ನಿರಂತರ ಸುತ್ತಾಟ ಮತ್ತು ಬೇಟೆಯಾಡುವಿಕೆಯಿಂದ ಸುಸ್ತಾಗುವ ಹುಲಿಯು ಮಾರಿಯಮ್ಮ ದೇವಿಯ ಸಮ್ಮುಖದಲ್ಲಿ ತೆಂಗಿನ ಕಾಯಿ ಮತ್ತು ಕೋಳಿಯನ್ನು ಬಲಿ ಪಡೆದು ಬ್ರಹ್ಮರ ಗುಂಡಕ್ಕೆ ಸುತ್ತು ಹೊಡೆದು ಬಾಳೆ ಎಲೆಯ ಮೇಲೆ ಬಂದು ಮಲಗುತ್ತದೆ. ಅನಂತರ ಮಾರ ಗುರಿಕಾರ ಹುಲಿಯ ಮೇಲೆ ನೀರು ಸಂಪ್ರೋಕ್ಷಣೆಗೈದ ಬಳಿಕ ಹಗ್ಗ ಹಿಡಿದು ಕೊಂಡವರು ವೇಷಧಾರಿಯ ಮೈ ತಿಕ್ಕುತ್ತಾರೆ. ಇದರಿಂದ ಆತನ ಆಯಾಸ ಪರಿಹಾರಗೊಂಡು ಆವೇಶ ಕೊನೆಗೊಳ್ಳುತ್ತದೆ.
ನಂಬಿಕೆ – ಅಪನಂಬಿಕೆಗಳ ನಡುವೆಯೂ ಸೇರುವ ಜನಸಂದಣಿ : ಕಾಪುವಿನ ಪಿಲಿ ಕೋಲದ ಬಗ್ಗೆ ಹಲವು ರೀತಿಯ ನಂಬಿಕೆ – ಅಪನಂಬಿಕೆಗಳಿವೆ. ಹುಲಿ ಮುಟ್ಟಿದರೆ ಜನ ಸಾಯುತ್ತಾರೆ, ಸಾಯುವುದಿಲ್ಲ ಎಂದು ವಾದಿಸುವವರೂ ಇಲ್ಲಿದ್ದಾರೆ. ಆದರೂ ಇಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಪಿಲಿ ಕೋಲವನ್ನು ವೀಕ್ಷಿಸಲು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಎಲ್ಲೆಡೆಯಿಂದ ಜನ ಸಾಗರವೇ ಆಗಮಿಸುತ್ತದೆ.



