ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಚಹಾ ಕಪ್‌ಗಳ ಬಳಕೆ : ರೈಲ್ವೇ ಸಚಿವ ಪಿಯೂಷ್​ ಗೋಯಲ್  -Vishwanews24

Featured, ರಾಷ್ಟ್ರ ನ್ಯೂಸ್

ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಚಹಾ ಕಪ್‌ಗಳ ಬಳಕೆ : ರೈಲ್ವೇ ಸಚಿವ ಪಿಯೂಷ್​ ಗೋಯಲ್  -Vishwanews24

ದೆಹಲಿ: ಇನ್ನು ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಪ್ರಯಾಣಿಕರು ಪ್ಲಾಸ್ಟಿಕ್‌, ಪೇಪರ್‌ ಬದಲು ಮಣ್ಣಿನಿಂದ ಮಾಡಿದ ಕಪ್‌ಗಳಲ್ಲಿ ಚಹಾ ಹೀರಲಿದ್ದಾರೆ.

ರೈಲ್ವೇ ಸಚಿವ ಪಿಯೂಷ್​ ಗೋಯಲ್ ಅವರು ಭಾನುವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಧಿಗಾವರ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಧಿಗಾವರ–ಬಂಡಿಕುಯಿ ವಿಭಾಗವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ಲಾಸ್ಟಿಕ್​ ಮುಕ್ತ ಭಾರತದ ಭಾಗವಾಗಿ ರೈಲ್ವೆ ನಿಲ್ದಾಣಗಳಲ್ಲಿ ಕುಲ್ಹಾದ್​​ ಅಂದರೆ, ಮಣ್ಣಿನ ಕುಡಿಕೆಗಳಿಂದ ಮಾತ್ರ ಇನ್ನು ಮುಂದೆ ಚಹಾ ಸಿಗುತ್ತದೆ. ದೇಶ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಗುರಿಯತ್ತ ಸಾಗುತ್ತಿದೆ. ಈಗಾಗಲೇ 400 ರೈಲ್ವೇ ನಿಲ್ದಾಣದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.

ಮಣ್ಣಿನ ಕುಡಿಕೆ ತಯಾರಿಸುವ ಕುಂಬಾರರಿಗೆ ಉದ್ಯೋಗ ಸಿಗುತ್ತದೆ. ನೈಸರ್ಗಿಕವಾಗಿ ಯೋಚಿಸಿದರೆ ಒಳ್ಳೆಯ ವ್ಯವಸ್ಥೆ. ಪರಿಸರಕ್ಕೆ ಮಣ್ಣಿನ ಕುಡಿಕೆಯಿಂದ ಯಾವುದೇ ಹಾನಿ ಇಲ್ಲ. ಆದ್ದರಿಂದ ಕುಲ್ಹಾದ್​ನಲ್ಲಿ ಚಹಾ ಮಾರಾಟ ಮಾಡುವುದು ನಮ್ಮ ಉದ್ದೇಶ ಎಂದು ಗೋಯಲ್ ತಿಳಿಸಿದರು.

ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಚಹಾ ನೀಡುವ ಪದ್ಧತಿ ಈಗಾಗಲೇ ಜಾರಿಯಲ್ಲಿದೆ. ಉಳಿದ ನಿಲ್ದಾಣಗಳಿಗೂ ಇದನ್ನು ವಿಸ್ತರಿಸಲು  ಮುಂದಾಗಿದ್ದೇವೆ. ಇದರಿಂದ ಗುಡಿ ಕೈಗಾರಿಕೆಯನ್ನೇ ನಂಬಿರುವ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಲಿದೆ. ಜೊತೆಗೆ ‘ಪ್ಲಾಸ್ಟಿಕ್‌ ಮುಕ್ತ ಭಾರತ’ ಅಭಿಯಾನಕ್ಕೆ ಸಚಿವಾಲಯ ಕೈಜೋಡಿಸಿದಂತಾಗಲಿದೆ’ ಎಂದಿದ್ದಾರೆ.

ರೈಲ್ವೆ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡುವ ಹಾಗೂ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ 2004ರಲ್ಲಿ ಮಣ್ಣಿನ ಕಪ್‌ಗಳಲ್ಲಿ ಟೀ ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಆಗ ಲಾಲು ಪ್ರಸಾದ್‌ ಅವರು ರೈಲ್ವೆ ಖಾತೆ ಸಚಿವರಾಗಿದ್ದರು. ಪರಿಸರ ಸ್ನೇಹಿ ಮಣ್ಣಿನ ಕಪ್‌ಗಳಿಗೆ ತಗಲುವ ವೆಚ್ಚ ದುಬಾರಿಯಾಗಿದ್ದು, ಇದರ ಪೂರೈಕೆಯೂ ಕಡಿಮೆಯಾಗಿತ್ತು. ಹೀಗಾಗಿ ಪ್ಲಾಸ್ಟಿಕ್‌ ಮತ್ತು ಪೇಪರ್‌ ಕಪ್‌ಗಳ ಬಳಕೆ ಹೆಚ್ಚಾಗಿತ್ತು.

ಕಳೆದ ವರ್ಷ ಗೋಯಲ್‌ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, 100 ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಟೀ ನೀಡುವುದನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿದ್ದರು. ವಿಮಾನ ಹಾಗೂ ಬಸ್‌ ನಿಲ್ದಾಣಗಳಲ್ಲಿ ಚಹಾ ಅಂಗಡಿಗಳ ಗುತ್ತಿಗೆ ಪಡೆದಿರುವವರೂ ಗ್ರಾಹಕರಿಗೆ ಮಣ್ಣಿನ ಕಪ್‌ಗಳಲ್ಲೇ ಟೀ ನೀಡುವುದನ್ನು ಕಡ್ಡಾಯಗೊಳಿಸುವಂತೆಯೂ ಸಲಹೆ ನೀಡಿದ್ದರು.

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಸಚಿವರಾಗಿದ್ದ ಅವಧಿಯಲ್ಲಿ ಗಡ್ಕರಿ ಅವರು ಮಣ್ಣಿನ ಕಪ್‌ಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕುಂಬಾರರಿಗೆ ವಿದ್ಯುತ್‌ ಚಾಲಿತ ಉಪಕರಣಗಳನ್ನು ಪೂರೈಸುವ ಯೋಜನೆಗೆ ಚಾಲನೆ ನೀಡಿದ್ದರು.