ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನ ಜನ ಬದಲಾವಣೆಯನ್ನು ತರಲಿದ್ದಾರೆ : ಡಿ.ಕೆ.ಶಿವಕುಮಾರ್ – Vishwanews24
ರಾಜಕೀಯ ತಂತ್ರಗಾರಿಕೆಯನ್ನು ಸಾಧಿಸಲು ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಿದ್ದೇವೆ
ಮಂಗಳೂರಿನಲ್ಲಿ ಬಿಜೆಪಿಗೆ ಪರೋಕ್ಷ ಎಚ್ಚರಿಕೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಂಗಳೂರು ಹೊರವಲಯದ ಬಿ.ಸಿ.ರೋಡ್ ನಲ್ಲಿರುವ ಆಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಶನಿವಾರ (ಫೆ 17) ಮಧ್ಯಾಹ್ನ ಎರಡು ಗಂಟೆಗೆ ಆಯೋಜಿಸಿದೆ.
ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಭಾಗಿಯಾಗಲಿದ್ದಾರೆ. ಬಿಜೆಪಿಯ ಭದ್ರಕೋಟೆಯೆಂದೇ ಗುರುತಿಸಲ್ಪಡುವ ಈ ಭಾಗದಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಣವನ್ನು ವಿವರಿಸಿದ್ದಾರೆ.
” ರಾಜಕಾರಣದಲ್ಲಿ ಯಾವುದೂ ಶಾಸ್ವತವಲ್ಲ, ಯಾವುದೂ ಅಸಾಧ್ಯವೂ ಅಲ್ಲ. ಅಸಾಧ್ಯ ಎಂದು ಭಾವಿಸಲಾಗಿರುವ ರಾಜಕೀಯ ತಂತ್ರಗಾರಿಕೆಯನ್ನು ಸಾಧಿಸಲು ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಿದ್ದೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
” ರಾಜಕಾರಣ ಎನ್ನುವುದು ವಿಶ್ವಾಸದ ಕಲೆ, ನನಗೆ ಖಚಿತ ಭರವಸೆಯಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಜನ ಬದಲಾವಣೆಯನ್ನು ತರಲಿದ್ದಾರೆ. ಯಾಕೆಂದರೆ ಈ ಭಾಗದಲ್ಲಿರುವ ಪ್ರಮುಖ ಸಮಸ್ಯೆ ನಿರುದ್ಯೋಗ. ಯುವಕರು /ವಿದ್ಯಾರ್ಥಿಗಳು ಕೆಲಸವನ್ನು ಅರಸಿ ಮುಂಬೈ, ದುಬೈ, ಸೌದಿ, ಬೆಂಗಳೂರಿಗೆ ಹೋಗುತ್ತಿದ್ದಾರೆ. ಆಡಳಿತ ಮಂಡಳಿಯವರು, ಇಲ್ಲಿನ ಅಶಾಂತಿಯಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಕಮ್ಮಿಯಾಗುತ್ತಿದೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
