ಉಗ್ರರಿಂದ ಹತ್ಯೆಯಾದ ಸೈನಿಕ ಔರಂಗಜೇಬ್ ತಂದೆ ಬಿಜೆಪಿ ಸೇರ್ಪಡೆ – Vishwanews24
ಶ್ರೀನಗರ: ಅಪಹರಣಕ್ಕೊಳಗಾಗಿ ಉಗ್ರರಿಂದ ಹತ್ಯೆಯಾದ ಸೈನಿಕ ಔರಂಗಜೇಬ್ ತಂದೆ ಬಿಜೆಪಿ ಸೇರಿದ್ದಾರೆ.
ಭಾನುವಾರ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಿದ್ದು ಈ ಸಂದರ್ಭದಲ್ಲಿ ನಿವೃತ್ತ ಸೇನಾಧಿಕಾರಿ, ಲೆಫ್ಟಿನೆಂಟ್ ( ನಿವೃತ್ತ) ರಾಕೇಶ್ ಕುಮಾರ್ ಶರ್ಮಾ ಜತೆಯಲ್ಲಿ ಮೊಹಮ್ಮದ್ ಹನೀಫ್ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ರೈಫಲ್ಮ್ಯಾನ್ ಆಗಿದ್ದ ಔರಂಗಜೇಬ್ ತಂದೆಯಾಗಿರುವ ಹನೀಫ್ ರಾಜೌರಿ ನಿವಾಸಿಯಾಗಿದ್ದಾರೆ. ಪಕ್ಷಕ್ಕೆ ಸ್ವಾಗತಿಸಿದ ಪ್ರಧಾನಿಗೆ ಹನೀಫ್ ತನ್ನ ಹುತಾತ್ಮ ಪುತ್ರನ ಚಿತ್ರ ನೀಡಿದರು.
ಈ ಹತ್ಯೆಗೆ ಕಾರಣವಾದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ಔರಂಗಜೇಬ್ರ ಸ್ನೇಹಿತರು ಹಾಗೂ ಸಂಬಂಧಿಕರು ಗಲ್ಫ್ ರಾಷ್ಟ್ರಗಳಿಂದ ವಾಪಸಾಗುತ್ತಿದ್ದಾರೆ. ಅಲ್ಲದೆ, ಭದ್ರತಾ ಪಡೆಗಳೊಂದಿಗೆ ಕೈಜೋಡಿಸಲು ಇವರು ಮುಂದಾಗಿದ್ದಾರೆ.
ಬಿಜೆಪಿ ಬಡವರ ಪರ ಚಿಂತನೆಯನ್ನು ಹೊಂದಿರುವ ಕಾರಣಕ್ಕೆ ನಾನು ಈ ಪಕ್ಷ ಸೇರುತ್ತಿದ್ದೇನೆ. ಈ ಹಿಂದಿನ ಸರಕಾರಗಳಿಗಿಂತ ವಿಭಿನ್ನವಾಗಿರುವ ಮೋದಿ ಸರಕಾರ ಬಡವರ ಕಲ್ಯಾಣಕ್ಕೆ ಸದಾ ತತ್ಪರವಾಗಿದೆ, ಎಂದು ಹನೀಫ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

