ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿ ಖಂಡಿಸಿ ಬೃಹತ್ ಪ್ರತಿಭಟನೆ – vishwanews24
ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿ ಖಂಡಿಸಿ ಉಚ್ಚಿಲ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ : ಗುರ್ಮೆ ಸುರೇಶ್ ಶೆಟ್ಟಿ
ರಾಷ್ಟ್ರೀಯ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವಿನಯ್ ಕುಮಾರ್ ಸೊರಕೆ
ಉಡುಪಿ: ಉಚ್ಚಿಲ ಪೇಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿ ಖಂಡಿಸಿ ಸೋಮವಾರ ಉಚ್ಚಿಲಪೇಟೆಯಲ್ಲಿ ಉಚ್ಚಿಲ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೆದ್ದಾರಿ ತಡೆ ನಡೆಸಿ, ಅಸಮರ್ಪಕ ಹೆದ್ದಾರಿ ಕಾಮಗಾರಿ, ಬೀದಿ ದೀಪ, ಪಾದಚಾರಿಗಳಿಗೆ ಆಗುತ್ತಿರುವ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ಹೆದ್ದಾರಿ ತಡೆಗೆ ಉಚ್ಚಿಲ ಪರಿಸರದ ಸಾರ್ವಜನಿಕರು ಸಾಥ್ ಕೊಟ್ಟರು. ಅಲ್ಲದೆ ಪ್ರತಿಭಟನಾ ಸಂದರ್ಭ ಉಚ್ಚಿಲ ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದವು.

ಉಚ್ಚಿಲ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖ್ಯವಾಗಿ ರಸ್ತೆ ದಾಟಲು ವ್ಯವಸ್ಥೆ ಇಲ್ಲ, ಬ್ಯಾರಿಕೇಡ್ ಸಮಸ್ಯೆ, ರಾತ್ರಿ ಬೀದಿದೀಪ ಉರಿಯುತ್ತಿಲ್ಲ, ಮಳೆ ನೀರು ಸಮರ್ಪಕವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲ, ಬೈಪಾಸ್ ರಸ್ತೆ ಇದ್ದರೂ ಸಮರ್ಪಕವಾಗಿಲ್ಲ, ಈ ಎಲ್ಲ ಕಾರಣದಿಂದಲೇ ಉಚ್ಚಿಲ ಪೇಟೆ ಸೇರಿದಂತೆ ಎರ್ಮಾಳ್-ಮೂಳೂರುನಲ್ಲಿಯೂ ಅಪಘಾತ ಹೆಚ್ಚುತ್ತಿದ್ದು, ಹಲವು ಜೀವ ಈಗಾಗಲೇ ಬಲಿಯಾಗಿದೆ. ಇನ್ನೆಷ್ಟು ಬಲಿ ಕೊಡಬೇಕೆಂದು ಸೇರಿದ್ದ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸಾರ್ವಜನಿಕ ಸಭೆ ಉಚ್ಚಿಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸಿರಾಜ್ NH ಅವರ ನೇತೃತ್ವದಲ್ಲಿ ನಡೆದ ಹೆದ್ದಾರಿ ತಡೆಗೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, MA ಗಫೂರ್, ಯೋಗೀಶ್ ಶೆಟ್ಟಿ ಸೇರಿದಂತೆ ಉಚ್ಚಿಲ ಪರಿಸರದ ಹಲವು ಗಣ್ಯರು ಭಾಗವಹಿಸಿದ್ದು, ಈ ವೇಳೆ ಅಪಘಾತಕ್ಕೆ ಕಾರಣವಾಗುತ್ತಿರುವ ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಯಿತು.

ವಾರದೊಳಗೆ ಸಭೆ: ಗುರ್ಮೆ ಸುರೇಶ್ ಶೆಟ್ಟಿ
ಈ ವೇಳೆ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೆ ದಿನೆ ಅಪಘಾತಗಳು ಹೆಚ್ಚುತ್ತಿವೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಸಂಸದರೊಂದಿಗೆ ಚರ್ಚಿಸಿ ವಾರದೊಳಗೆ ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದಂತೆ ಸಭೆ ಕರೆದು ಉಚ್ಚಿಲ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಕೆಲವು ತುರ್ತು ಕಾಮಗಾರಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿ ಬಳಿಕ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ತಹಶೀಲ್ದಾರ್ ಪ್ರತಿಭಾ, ಸಿಪಿಐ ಜಯಶ್ರೀ ಮಾನೆ, ರಾಷ್ಟ್ರೀಯ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅವರನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತುರ್ತಾಗಿ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದರು.

