ಉಡುಪಿ : ಅಡುಗೆ ಅನಿಲ ಬೆಲೆ ಏರಿಕೆ – ಜನರಿಂದ ಆಯ್ಕೆಯಾದ ಸರ್ಕಾರ ಯಾಕೆ ಜನರನ್ನು ಈ ರೀತಿ ಲೂಟಿ ಮಾಡುತ್ತಿದೆ : ವೆರೋನಿಕಾ ಕಾರ್ನೆಲಿಯೋ ಆಕ್ರೋಶ – Vishwanews24
ಅಡುಗೆ ಅನಿಲ ಬೆಲೆ ಏರಿಕೆ – ಜನರಿಂದ ಆಯ್ಕೆಯಾದ ಸರ್ಕಾರ ಯಾಕೆ ಜನರನ್ನು ಈ ರೀತಿ ಲೂಟಿ ಮಾಡುತ್ತಿದೆ : ವೆರೋನಿಕಾ ಕಾರ್ನೆಲಿಯೋ ಆಕ್ರೋಶ – Vishwanews24
ಉಡುಪಿ: ಅಡುಗೆ ಅನಿಲದ ಮೇಲೆ ಇಂದಿನಿಂದ 50 ರೂ. ಬೆಲೆ ಏರಿಕೆ ಮಾಡಿರುವ ಬಿಜೆಪಿ ಸರ್ಕಾರ ಜನರ ಗಾಯದ ಮೇಲೆ ಬರೆ ಎಳೆದಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕಾರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಆರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿದ್ದಾರೆ. ಹೀಗಿರುವಾಗ ಜನಸಾಮಾನ್ಯರ ನಿತ್ಯದ ಬದುಕಿಗೆ ಸುಲಭವಾಗುವ ರೀತಿಯಲ್ಲಿ ಬೆಲೆಗಳನ್ನು ಇಳಿಕೆ ಮಾಡಬೇಕಿತ್ತು. ಆದರೆ ದಿನನಿತ್ಯ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಏಕಾಏಕಿ 50 ರೂ. ಏರಿಸಿರುವುದು ಖಂಡನೀಯ. ಈಗಾಗಲೇ ಒಂದು ಸಿಲಿಂಡರ್ ಗೆ 1020 ರೂ. ನೀಡುತ್ತಿದ್ದು, ಇನ್ನು ಮುಂದೆ 1070 ರೂ.ಗಳನ್ನು ನೀಡಿ ಸಿಲಿಂಡರ್ ಖರೀದಿಸಬೇಕಾಗುತ್ತದೆ. ಕೆಲಸ ಇಲ್ಲದೆ ಪರದಾಡುತ್ತಿರುವ ಜನರಿಗೆ ಇನ್ನಷ್ಟು ತೊಂದರೆ ನೀಡುತ್ತಿರುವ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲವೇ? ಜನರಿಂದ ಆಯ್ಕೆಯಾದ ಸರ್ಕಾರ ಯಾಕೆ ಜನರನ್ನು ಈ ರೀತಿ ಲೂಟಿ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ನಿರುದ್ಯೋಗ ಸಮಸ್ಯೆ ಶೇ. 7.8ಕ್ಕೆ ತಲುಪಿದ್ದು ಗರಿಷ್ಠ ಏರಿಕೆ ಕಂಡಿದೆ. ಮಳೆಗಾಲ ಆರಂಭವಾಗಿರುವುದರಿಂದ ಹಣಕಾಸಿಗೂ ಕಷ್ಟ ಇದೆ. ಒಪ್ಪೊತ್ತಿನ ಊಟಕ್ಕೂ ಜನ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ತಾಳ್ಮೆ ಪರೀಕ್ಷೆ ಮಾಡದೆ ಕೂಡಲೇ ಬೆಲೆ ಇಳಿಕೆ ಮಾಡಿ ನೆಮ್ಮದಿಯ ಜೀವನ ಸಾಗಿಸಲು ಜನಸಾಮಾನ್ಯರಿಗೆ ಅನುವು ಮಾಡಿಕೊಡಬೇಕು ಎಂದವರು ಆಗ್ರಹಿಸಿದ್ದಾರೆ.
