ಉಡುಪಿ: ಎಸ್ ಐ ಅನಂತ ಪದ್ಮನಾಭ ಅಮಾನತು ಆದೇಶವನ್ನು ವಾಪಾಸು ಪಡೆಯುವಂತೆ ಉಡುಪಿ ಶಾಸಕ ರಘುಪತಿ ಭಟ್ ಆಗ್ರಹ -Vishwanews24
ಉಡುಪಿ : ಯಾವುದೇ ಕಾರಣವಿಲ್ಲದೆ ಸೋಮವಾರ ರಾತ್ರಿ ಉಡುಪಿ ನಗರಠಾಣೆಯ ಠಾಣಾಧಿಕಾರಿಯಾಗಿದ್ದ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿರುವುದು ಖಂಡನೀಯ ಕೂಡಲೇ ಅವರ ಆದೇಶವನ್ನು ವಾಪಾಸು ಪಡೆಯುವಂತೆ ಉಡುಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಒಂದು ವಾರದ ಹಿಂದೆ ಅಜ್ಜರಕಾಡು ಪಾರ್ಕಿನಲ್ಲಿ ಒಬ್ಬ ಯುವಕ ಇನ್ನೊಂದು ಧರ್ಮದ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಕಂಡ ಸಾರ್ವಜನಿಕರು ಆ ಯುವಕನಿಗೆ ಸಣ್ಣ ಪ್ರಮಾಣದ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಎಸ್.ಐ. ಅವರು ಆ ಯುವಕನಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಆದರೆ 5-6 ದಿನಗಳ ನಂತರ ಇತರರ ಕುಮ್ಮಕ್ಕಿನಿಂದ ಆ ಯುವಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದಾನೆ. ನಂತರ ಎಸ್.ಪಿಯವರು ಎಫ್.ಐ.ಆರ್. ಮಾಡಿದ್ದಾರೆ.
ಎಸ್ಪಿಯವರಿಗೆ ನಾನು ಪ್ರಶ್ನೆ ಕೇಳ ಬಯಸುತ್ತೇನೆ ಒರ್ವ ಎಸ್ ಐ ಅವರು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿಲ್ಲ ಎಂಬ ಕಾರಣಕ್ಕೆ ಅವರನ್ನು ಅಮಾನತು ಮಾಡುವುದಾದರೆ ಅವರದೇ ಕೈಕೆಳಗೆ ಇರುವ ಇನ್ನ ಎಷ್ಟೋ ಠಾಣೆಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮಾಹಿತಿ ನೀಡುತ್ತೇನೆ ಅವರನ್ನು ಸಹ ಇವರು ಅಮಾನತು ಮಾಡವರೇ ಎಂದು ಪ್ರಶ್ನಿಸಿದರು. ಎರಡು ಧರ್ಮಗಳ ನಡುವೆ ಸೌಹಾರ್ದತೆ ಇರಲಿ ಎಂಬ ಉದ್ದೇಶದಿಂದ ಮಾಡಿದ ಕೆಲಸಕ್ಕೆ ಅಮಾಯಕ ಠಾಣಾಧಿಕಾರಿಯನ್ನು ಅಮಾನತು ಮಾಡಿರುವುದು ಖಂಡನೀಯ. ಒರ್ವ ಜವಾಬ್ದಾರಿಯುತ ಠಾಣಾಧಿಕಾರಿ ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದು ಅಂತಹ ಒರ್ವ ಸಭ್ಯ ಅಧಿಕಾರಿಗೆ ಇಂತಹ ಶಿಕ್ಷೆ ನೀಡಿರುವುದನ್ನು ನಾನು ಶಾಸಕನಾಗಿ ಸಹಿಸುವುದಿಲ್ಲ. ಒಂದು ಧರ್ಮದವರ ಒತ್ತಡಕ್ಕೆ ಮಣಿದು ಎಸ್ಪಿಯವರು ಇಂತಹ ನಿರ್ಧಾರ ಕೈಗೊಂಡಿರುವುದು ನನಗೆ ತುಂಬಾ ಬೇಸರವಾಗಿದೆ. ಈ ಘಟನೆಯ ಬಗ್ಗೆ ಈಗಾಗಲೇ ನಾನು ಗೃಹಮಂತ್ರಿ ಮತ್ತು ಪಶ್ಚಿಮ ವಲಯ ಐಜಿಪಿಯವರಿಗೆ ಕೂಡ ಮಾಹಿತಿ ನೀಡಿದ್ದೇನೆ. ಕೂಡಲೇ ಅವರ ಅಮಾನತು ಆದೇಶವನ್ನು ವಾಪಾಸು ಪಡೆದು ಉಡುಪಿಯಲ್ಲೇ ಅವರಿಗೆ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಅನ್ಯ ಕೋಮಿನ ಯುವಕ ಯುವತಿಯರು ಮಾತನಾಡುತಿದ್ದಾಗ ಇನ್ನೊಂದು ಗುಂಪು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಉಡುಪಿ ನಗರ ಠಾಣೆ ಉಪ ನಿರೀಕ್ಷಕ, ಇಬ್ಬರು ಹೆಡ್ ಕಾನ್ಸ್ಟೆಬಲ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅಮಾನತುಗೊಳಿಸಿದ್ದರು.
