ಉಡುಪಿ: ಒಂದು ಕೋಟಿ ರೂ. ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಿದ ಪೊಲೀಸರು -Vishwanews24
ಉಡುಪಿ: ಒಂದು ಕೋಟಿ ರೂ. ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಿದ ಪೊಲೀಸರು -Vishwanews24
ಪಡುಬಿದ್ರೆ : ಅಂತರಾಷ್ಟ್ರೀಯ ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಜಪ್ಪಿ ಮಾಡಿದ್ದ ಒಂದು ಕೋಟಿ ರೂ. ಅಧಿಕ ಬೆಲೆಯ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಉಡುಪಿ ಜಿಲ್ಲೆಯ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ನಾಶಪಡಿಸಲಾಯಿತು.
30,13,100 ರೂ. ಬೆಲೆಯ 103 ಕೆ.ಜಿ ಗಾಂಜಾ, 9,82,500 ರೂ. ಬೆಲೆಯ ಹೈಡ್ರೋವೀಡ್ ಗಾಂಜಾ, 30,33,000 ರೂ. ಬೆಲೆಯ ಎಂ.ಡಿ.ಎಂ.ಎ ಮಾತ್ರೆಗಳು, 30 ಲಕ್ಷ ರೂ. ಬೆಲೆಯ ಎಲ್.ಎಸ್.ಡಿ ಸ್ಟಿಪ್ಸ್ ಸೇರಿ ಒಟ್ಟು 1,00,28,600 ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ಮಣಿಪಾಲ ಪೊಲೀಸ್ ಠಾಣೆಯಲ್ಲಿ 12, ಉಡುಪಿ ನಗರ ಠಾಣೆಯಲ್ಲಿ 10, ಸಿಇಎನ್ ರಲ್ಲಿ 8, ಕುಂದಾಪುರ 6, ಕಾಪು 5, ಪಡುಬಿದ್ರಿ ಹಾಗು ಕುಂದಾಪುರ ಗ್ರಾಮಾಂತರದಲ್ಲಿ ತಲಾ 2, ಗಂಗೊಳ್ಳಿ, ಹಿರಿಯಡ್ಕ ಮತ್ತು ಶಿರ್ವ ಠಾಣೆಗಳಲ್ಲಿ ತಲಾ 1 ಸೇರಿ 13 ವರ್ಷಗಳಿಂದ ಒಟ್ಟು 50ಕ್ಕೂ ಪ್ರಕರಣಗಳಲ್ಲಿ ಜಪ್ಪಿ ಮಾಡಲಾದ ಮಾದಕ ವಸ್ತುಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಪಿ ವಿಷ್ಣುವರ್ಧನ್, ಎ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಪ್ರಮೋದ್ ಕುಮಾರ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ್ ,ಕಾರ್ಕಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್, ವೃತ್ತ ನಿರೀಕ್ಷಕರಾದ ಮಂಜುನಾಥ್, ಸಂಪತ್, ಮಂಜುನಾಥ ಗೌಡ, ಪ್ರಮೋದ್ ಹಾಗು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
