ಉಡುಪಿ : ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಯುವಕನ ಸಾವು ಪ್ರಕರಣ : ಹಲ್ಲೆ, ಬೆದರಿಕೆ ಹಿನ್ನೆಲೆ ಆತ್ಮಹತ್ಯೆ ಪ್ರಚೋದನೆ ಆರೋಪ !vishwanews24
ಪ್ರೀತಿಸುತ್ತಿದ್ದ ಯುವತಿಯ ಸಹೋದರರು ಹಾಗೂ ಇತರರಿಂದ ಹಲ್ಲೆ ನಡೆಸಿದ ಆರೋಪ..
11 ಮಂದಿ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು
ಉಡುಪಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಪರಿಣಾಮ ಮನನೊಂದು ಯುವಕನೊಬ್ಬ ಉಡುಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಮೃತಪಟ್ಟಿರುವ ಘಟನೆ ಅಕ್ಟೋಬರ್ 30ರಂದು ನಡೆದಿದೆ.
ಮೃತ ಯುವಕನನ್ನು ಪೆರ್ಡೂರಿನ ಪ್ರದೀಪ್ ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಪ್ರದೀಪ್ ಕಳೆದ ಎಂಟು ವರ್ಷಗಳಿಂದ ಶ್ರಾವ್ಯ ಶೆಟ್ಟಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಅಕ್ಟೋಬರ್ 27ರಂದು ರಾತ್ರಿ ಸುಮಾರು 10 ಗಂಟೆಗೆ ನಾಯರ್ ಕೋಡಿನಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಶ್ರಾವ್ಯ ಶೆಟ್ಟಿಯ ಸಹೋದರರು ಹಾಗೂ ಇತರರು ಮೂರು ಕಾರುಗಳಲ್ಲಿ ಬಂದು ಆತನನ್ನು ಶ್ರಾವ್ಯ ಶೆಟ್ಟಿಯ ಮನೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.ಅಲ್ಲಿ ಪ್ರಸನ್ನ ಶೆಟ್ಟಿ ಎಂಬಾತ ಬೆತ್ತದಿಂದ ಪ್ರದೀಪನ ಕಾಲು ಮತ್ತು ಬೆನ್ನಿಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದು, ಆತನೊಂದಿಗೆ ಇದ್ದವರು ಮರದ ದೊಣ್ಣೆಗಳಿಂದ ದೇಹದ ವಿವಿಧ ಭಾಗಗಳಿಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಿಜೆಪಿ ಸರಕಾರವನ್ನು ಉರುಳಿಸಲು ನಡೆಯುತ್ತಿರುವ ಹೋರಾಟ: ಪ್ರಕಾಶ್ ರಾಜ್ – vishwanews24
ವಿಷಯ ತಿಳಿದ ಪ್ರದೀಪನ ಅಣ್ಣ ದಿಲೀಪ್ ಕುಮಾರ್ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕಳುಹಿಸಿದ್ದು, ಅವರು ಶ್ರಾವ್ಯ ಶೆಟ್ಟಿಯ ಮನೆಗೆ ತೆರಳಿದಾಗ ಆರೋಪಿತರು ಪ್ರದೀಪನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಸ್ನೇಹಿತರನ್ನು ಕಂಡ ಬಳಿಕ ಹಲ್ಲೆ ನಿಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮರುದಿನ ಅಕ್ಟೋಬರ್ 28ರಂದು ಗಾಯಗೊಂಡ ಪ್ರದೀಪ್ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದನು. ಆತನನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದ ಅಣ್ಣನಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾನೆ. ಅಲ್ಲದೆ, ಶ್ರಾವ್ಯ ಶೆಟ್ಟಿ ಹಾಗೂ ಆಕೆಯ ಸಹೋದರರು ಬೆದರಿಕೆ ಹಾಕಿರುವುದಾಗಿಯೂ ತಿಳಿಸಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ತೀವ್ರವಾಗಿ ಮನನೊಂದಿದ್ದ ಪ್ರದೀಪ್ ಅಕ್ಟೋಬರ್ 30ರಂದು ಸಂಜೆ ಸುಮಾರು 5.30ಕ್ಕೆ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೌಚಾಲಯದೊಳಗೆ ಕುತ್ತಿಗೆಗೆ ಬಿಳಿ ಬಣ್ಣದ ಟ್ಯಾಗ್ ಸುತ್ತಿಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದಾನೆ.
ಈ ಸಾವಿಗೆ ಹಲ್ಲೆ ಮತ್ತು ಬೆದರಿಕೆ ಮೂಲಕ ಪ್ರಚೋದನೆ ನೀಡಿರುವುದೇ ಕಾರಣ ಎಂದು ಆರೋಪಿಸಿ ಮೃತನ ಅಣ್ಣ ದಿಲೀಪ್ ಕುಮಾರ್ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ್, ಸನತ್, ಹೊರರಾಜ್ಯದ ಇಬ್ಬರು ಕಾರ್ಮಿಕರು ಹಾಗೂ ಇತರರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 108 ಜೊತೆಗೆ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಹಲ್ಲೆ ಮತ್ತು ಬೆದರಿಕೆ ಆರೋಪಗಳ ಕುರಿತು ತನಿಖೆಯಿಂದ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.
