ಉಡುಪಿ : ಪಿಡಿಒ ನಿಂದ ರಾಷ್ಟ್ರಪತಿ ವರೆಗೆ RSS ಕಾರ್ಯಕರ್ತರು ಇದ್ದಾರೆ : ಹೆಚ್ಡಿಕೆಗೆ ಸುನೀಲ್ ಕುಮಾರ್ ತಿರುಗೇಟು – Vishwanews24
ಪಿಡಿಒ ನಿಂದ ರಾಷ್ಟ್ರಪತಿ ವರೆಗೆ ಆರೆಸ್ಸೆಸ್ ಕಾರ್ಯಕರ್ತರು ಇದ್ದಾರೆ : ಹೆಚ್ಡಿಕೆಗೆ ಸುನೀಲ್ ಕುಮಾರ್ ತಿರುಗೇಟು – Vishwanews24
ಉಡುಪಿ: ದೇಶದ 4000 ಐಎಎಸ್ ಐಪಿಎಸ್ ಗಳು, RSS ಕಾರ್ಯಕರ್ತರು ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ರಾಜ್ಯ ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿರುಗೇಟು ನೀಡಿದ್ದು ಕೇವಲ 4000 ಅಲ್ಲ ಅದಕ್ಕೂ ಹೆಚ್ಚು ಜನ ಆರೆಸ್ಸೆಸ್ ನವರಿದ್ದಾರೆ ಆದರೆ ಕುಮಾರ ಸ್ವಾಮಿಯವರ ಲೆಕ್ಕಾಚಾರ ಕಡಿಮೆಯಾಗಿದೆ, ಇನ್ನು ಹೆಚ್ಚು ಮಂದಿ ಇದ್ದಾರೆ ಎಂದು ಹೇಳೀದ್ದಾರೆ.
ಅವರು ಬುಧವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆರೆಸ್ಸೆಸ್ ಒಂದು ವ್ಯಕ್ತಿಯನ್ನು ನಿರ್ಮಾಣಮಾಡುವ ಸಂಘಟನೆಯಾಗಿದ್ದು ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಸಂಘಟನೆಯಾಗಿದೆ. ನಮ್ಮಂಥ ಅನೇಕ ವ್ಯಕ್ತಿಗಳನ್ನು ಆರೆಸ್ಸೆಸ್ ತಯಾರು ಮಾಡಿದ್ದು, ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡವರು ಬೇರೆಬೇರೆ ಕ್ಷೇತ್ರದಲ್ಲಿದ್ದಾರೆ. ಆರೆಸ್ಸೆಸ್ ನಲ್ಲಿ ತರಬೇತಿ ಹೊಂದಿದವರು ಸಾವಿರಾರು ಮಂದಿ ವಿವಿಧ ಕ್ಷೇತ್ರಗಳಲ್ಲಿ ಇದ್ದಾರೆ ಅದು ಕೇವಲ ಐಎಎಸ್ ಐಪಿಎಸ್ ಗಳು ಮಾತ್ರ ಅಲ್ಲ. ಪಿಡಿಒ ನಿಂದ ರಾಷ್ಟ್ರಪತಿ ವರೆಗೆ ಆರೆಸ್ಸೆಸ್ ಕಾರ್ಯಕರ್ತರು ಇದ್ದಾರೆ. ಎಲ್ಲರ ಮುಖಾಂತರ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಇದ್ದು, ರಾಷ್ಟ್ರ ನಿರ್ಮಾಣದ ಪರ ಇರುವವರು ಇದನ್ನು ಸ್ವಾಗತಿಸಿದರೆ, ರಾಷ್ಟ್ರ ನಿರ್ಮಾಣದ ಕನಸು ಇಲ್ಲದವರು ವಿರೋಧಿಸುತ್ತಾರೆ. ಈ ರೀತಿ ಮಾತನಾಡುವವರ ಬಗ್ಗೆ ಅನುಕಂಪವಿದೆ ಎಂದರು.
ಭಾರತ ವಿಶ್ವಕ್ಕೆ ಮಾರ್ಗದರ್ಶನ ಮಾಡಬೇಕೆಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಬಯಸಿದ್ದರು ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆ ಸಾಧನೆಯನ್ನು ನನಸು ಮಾಡುತ್ತಿದ್ದಾರೆ. ಭಾರತ ನಂಬರ್1 ಆಗಲು ವ್ಯಕ್ತಿ ನಿರ್ಮಾಣವಾಗಬೇಕು ವ್ಯಕ್ತಿ ನಿರ್ಮಾಣ ಮಾಡುವ ಏಕೈಕ ಸಂಘಟನೆ ಆರೆಸ್ಸೆಸ್. ಅಪ್ಪ ಮಕ್ಕಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಮಾತನಾಡುತ್ತಾರೆ. ಆರೆಸ್ಸೆಸ್ ಹೆಸರನ್ನು ಬೇಕಾದಂತೆ ಬಳಸಿಕೊಂಡಿದ್ದಾರೆ ಆದರೆ ಅವರಿಗೆ ಬೇಕಾದಂತೆ ಬಳಸಿಕೊಳ್ಳುವ ಸಂಘಟನೆ ಆರೆಸ್ಸೆಸ್ ಅಲ್ಲ ಮತ್ತು ಕುಮಾರಸ್ವಾಮಿ ಹೇಳಿದರು ಅಂತ ಈ ಕೆಲಸ ನಿಲ್ಲೋದಿಲ್ಲ. ಈ ಕೆಲಸ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಅವರು ಹೇಳಿದರು.
