ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ ; ಇಬ್ಬರ ಬಂಧನ – vishwanews24

Featured, ಉಡುಪಿ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ ; ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಬೆದರಿಕೆ ಹಾಕಿ 42,97,350 ರೂ. ಹಣ ವಸೂಲಿ ಮಾಡಿ ಹಿಂದಿರುಗಿಸದೆ ಮೋಸ ಮಾಡಿರುವ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ತಾಲೂಕಿನ ಯಡ್ತರೆ ಮಯ್ಯಾಡಿ ಮೂಲದ ಬೆಂಗಳೂರು ಬಸವೇಶ್ವರ ನಗರದ ನಿವಾಸಿ ನಾಗರತ್ನ ಎಚ್. (42) ಹಾಗೂ ಕಾರ್ಕಳ ಮಿಯಾರು ಮೂಲದ ಬೆಂಗಳೂರು ಮೆಜಿಸ್ಟಿಕ್ ನಿವಾಸಿ ಹೇಮಂತ್ (41) ಬಂಧಿತ ಆರೋಪಿಗಳು.

ಉಡುಪಿಯ ಪ್ರದೀಪ್ ಕೆ. ಎಂಬವರು ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡಿಕೊಂಡಿದ್ದು, ಇವರು ತನ್ನ ವಿವಾಹದ ಬಗ್ಗೆ ಹುಡುಗಿಯನ್ನು ಹುಡುಕುತ್ತಿದ್ದರು. 2024ರ ಜನವರಿಯಲ್ಲಿ ಕನ್ನಡ ಜೋಡಿ ಮ್ಯಾಟ್ರಿಮೋನಿ ಆಪ್‌ನಲ್ಲಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಎಸ್. ಕಡಂಬಿ ವಿದ್ಯಾ ಕೇಂದ್ರದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಡಬೆಟ್ಟು ಹೆಣ್ಬೇರು ನಿವಾಸಿ ನಾಗರತ್ನ ಎ. ಎಂಬವರ ಪರಿಚಯವಾಗಿತ್ತು.

ಇದನ್ನೂ ಓದಿ :

ನ.1ರಿಂದ 30ರವರೆಗೆ ಬಿಜೆಪಿಯಿಂದ ರಾಜ್ಯಾದ್ಯಂತ ‘ಅರಾಜಕತೆ ಹಟಾವೋ’ ಅಭಿಯಾನ – vishwanews24

ಆಕೆ ಪ್ರದೀಪ್ ಅವರ ಜೊತೆ ವಿವಾಹದ ಬಗ್ಗೆ ಮಾತನಾಡಿದ್ದಳು. ಆದರೆ ಪ್ರದೀಪ್ ಆಕೆಯ ಪ್ರಸ್ತಾಪವನ್ನು ಒಪ್ಪದೇ ತನ್ನ ಜಾತಿಯ ಹೆಣ್ಣನ್ನು ಮದುವೆಯಾಗುವುದಾಗಿ ಹೇಳಿ ನಿರಾಕರಿಸಿದ್ದರು. ನಂತರದ ದಿನಗಳಲ್ಲಿ ನಾಗರತ್ನ, ಪ್ರದೀಪ್‌ಗೆ ಕರೆ ಹಾಗೂ ಮೆಸೇಜ್‌ಗಳನ್ನು ಮಾಡಿಕೊಂಡು ತನ್ನ ಕಷ್ಟಗಳನ್ನು ಹೇಳಿಕೊಂಡು ಹಂತ-ಹಂತವಾಗಿ ತನ್ನ ಖಾತೆಗೆ ಹಾಗೂ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಚಿಕ್ಕಮ್ಮನ ಮಗ ಪ್ರಮೋದ್ ಮತ್ತು ತನ್ನ ಅಕ್ಕ ರೇಣುಕಾ ಅವರ ಖಾತೆಗೂ ಹಣ ಹಾಕಿಸಿಕೊಂಡಿದ್ದಳು ಎಂದು ದೂರಲಾಗಿದೆ.

2024ರ ಜನವರಿಯಿಂದ 2026ರ ಜನವರಿಯ ಮಧ್ಯಾವಧಿಯಲ್ಲಿ ಪ್ರದೀಪ್ ಅವರಿಂದ ಒಟ್ಟು 42,97,350 ರೂ. ಹಣವನ್ನು ಪಡೆದುಕೊಂಡಿದ್ದಳು ಎನ್ನಲಾಗಿದೆ.

ಈ ಹಣವನ್ನು ವಾಪಸ್ಸು ಕೇಳಿದರೆ ಪ್ರದೀಪ್‌ಗೂ ತನಗೂ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಕೇಸು ದಾಖಲಿಸಿ, ಪ್ರದೀಪ್ ಕೆಲಸ ಮಾಡುವ ಉಡುಪಿ ಕಚೇರಿಗೆ ಬಂದು ಸಿಬ್ಬಂದಿ ಮತ್ತು ಗ್ರಾಹಕರ ಎದುರು ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಳು. ಅಲ್ಲದೇ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹಾಗೂ ಸಂಸ್ಥೆಯ ಹಣವನ್ನು ದುರುಪಯೋಗ ಮಾಡಿ ಮೋಸ ವಂಚನೆ ಮಾಡುತ್ತಿದ್ದೀರಿ ಎಂದು ಹೇಳಿ ಸುಳ್ಳು ಪತ್ರ ಬರೆದು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಕರೆ ಹಾಕಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :

ಪುತ್ತೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಆಕೆ ಇತರರೊಂದಿಗೆ ಸೇರಿಕೊಂಡು ಬಲವಂತವಾಗಿ ಬೆದರಿಸಿ ಹಣ ವಸೂಲಿ ಮಾಡಿ ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ಪ್ರದೀಪ್ ನೀಡಿದ ದೂರಿನಂತೆ ನಾಗರತ್ನ ಎ., ಹೇಮಂತ್ ಕರ್ಕೇರಾ, ಪ್ರಮೋದ್ ಹಾಗೂ ರೇಣುಕಾ ಎಂಬವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಎಸ್ಸೈಗಳಾದ ಭರತೇಶ್ ಕಂಕಣವಾಡಿ, ರತ್ನಾಕರ ಕೆ. ಹಾಗೂ ಸಿಬ್ಬಂದಿ ಪ್ರಸನ್ನ ಸಿ., ಜೀವನ್ ಕುಮಾರ್, ಜಗನ್ನಾಥ ನಾಯ್ಕ, ಹೇಮಂತ್ ಕುಮಾರ್ ಮತ್ತು ಸವಿತಾ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ಅ.26ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಸವೇಶ್ವರ ನಗರದಲ್ಲಿ ನಾಗರತ್ನ ಮತ್ತು ಹೇಮಂತ್ ಅವರನ್ನು ವಶಕ್ಕೆ ಪಡೆದು ತನಿಖಾಧಿಕಾರಿಯ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ :

ಸೌಜನ್ಯ ಪ್ರಕರಣ : ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಕೈಬಿಡುವಂತೆ ಶಶಿಕುಮಾರ್ ಮನವಿ – vishwanews24

Leave a Reply