ಉಡುಪಿ: ಮಲ್ಪೆತೊಟ್ಟಂ ಕಡಲ ತೀರದಲ್ಲಿ ಹಿಮಾಲಯ ಅಘೋರಿಗಳಿಂದ ನಡೆಯುತ್ತಿದೆ ಮಹಾಯಾಗ – Vishwanews24
ಉಡುಪಿ: ಮಲ್ಪೆತೊಟ್ಟಂ ಕಡಲ ತೀರದಲ್ಲಿ ಹಿಮಾಲಯ ಅಘೋರಿಗಳಿಂದ ಗ್ರಹಣ ದೋಷ ನಿವಾರಣೆಗಾಗಿ ನಡೆಯುತ್ತಿದೆ ಮಹಾಯಾಗ
ಉಡುಪಿ: ಮಲ್ಪೆ ಸಮೀಪದ ತೊಟ್ಟಂನಲ್ಲಿ ಉತ್ತರ ಭಾರತದ ಅಘೋರ ಪಂಥದ ಸನ್ಯಾಸಿಯರು ರಹಸ್ಯವಾಗಿ ಮಹಾಯಾಗವೊಂದನ್ನು ಕಳೆದ ಒಂದು ವಾರದಿಂದೀಚೆಗೆ ನಡೆಸುತ್ತಿದ್ದಾರೆ. 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿ ಜಗತ್ತುಗೆ ಉಂಟಾಗಿರುವ ದೋಷಗಳ ನಿವಾರಣೆಗಾಗಿ ಅಘೋರಿಗಳು ಈ ಯಾಗ ನಡೆಸುತ್ತಿದ್ದಾರೆ. ಈ ರೀತಿ ಗ್ರಹಣವಾದಾಗಲೆಲ್ಲ ಪ್ರಾಕೃತಿಕ ವಿಪ್ಲವಗಳು ಸಂಭವಿಸುವ ಆತಂಕ ಇರುವ ಕಾರಣಕ್ಕೆ ಮಹಾಯಾಗ ಕೈಗೊಳ್ಳಲಾಗಿದೆ.
ಅಘೋರಿಗಳು ನಡೆಸುತ್ತಿರುವ ಮಹಾ ಮೃತ್ಯುಂಜಯ ಯಾಗ ಇದೀಗ ಹೊರಜಗತ್ತಿಗೆ ತಿಳಿದುಬಂದಿದೆ. ಸಂಚಾರದಲ್ಲಿದ್ದ ಅಘೋರಿಗಳು ಲೋಕ ಕಲ್ಯಾಣಾರ್ಥ ಈ ಯಾಗ ಕೈಗೊಂಡಿದ್ದಾರೆ. ಸಂಚಾರ ಮಾರ್ಗದಲ್ಲಿ ಇದ್ದಲ್ಲಿಯೇ ಯಾಗ ನಡೆಸುವಂತೆ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಈ ಮಹಾ ಯಾಗವನ್ನು ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ನಡೆಸಲಾಗುತ್ತಿದೆ. ಯಾಗ ನಡೆಸಲು ಸೂಕ್ತ ಸ್ಥಾನವನ್ನು ಹುಡುಕಿ ಅವಿಭಜಿತ ಜಿಲ್ಲೆಗಳ ಅನೇಕ ಸ್ಥಳಗಳಿಗೆ ಅಘೋರಿಗಳು ಭೇಟಿ ಕೊಟ್ಟಿದ್ದರು. ಬಳಿಕ ತೊಟ್ಟಂ ಪರಿಸರದ ಕಡಲ ತೀರದ ಒಂದು ಫಾರ್ಮ್ ಹೌಸ್ ಅನ್ನು ಯಾಗಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
ಉಡುಪಿ : ತುರ್ತು ಚಿಕಿತ್ಸೆ – ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆಸ್ಪತ್ರೆಗೆ ದಾಖಲು – Vishwanews24
ಗೌಪ್ಯ ಯಾಗ ಸ್ಥಳೀಯವಾಗಿ ಯಾವುದೇ ಸಂಪರ್ಕವಿಲ್ಲದೆ ಸೀಮಿತ ವ್ಯಕ್ತಿಗಳ ಸಹಕಾರದೊಂದಿಗೆ ಅತ್ಯಂತ ಗೌಪ್ಯವಾಗಿ ಯಾಗ ನಡೆಸಲಾಗುತ್ತಿದೆ. ಸತತ ಒಂಬತ್ತು ದಿನಗಳ ಕಾಲ ಅಹೋರಾತ್ರಿ ಈ ಯಾಗ ಮುಂದುವರಿಯಲಿದೆ. ಏಕಕಾಲದಲ್ಲಿ ಎರಡು ಗ್ರಹಣಗಳು ಬಂದ ಸಂದರ್ಭದಲ್ಲಿ, ಪ್ರಾಕೃತಿಕ ಅನಾಹುತಗಳು ಸಂಭವಿಸುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತೆ. ಅದಕ್ಕೆ ಪೂರಕವೋ ಎಂಬಂತೆ ವಿಶ್ವದ ನಾನಾ ಭಾಗಗಳಲ್ಲಿ ಗ್ರಹಣದ ನಂತರ ಭೂಕಂಪಗಳು ಕೂಡ ಸಂಭವಿಸಿವೆ. ರಾತ್ರಿ ಹೊತ್ತು ಮಾತ್ರ ಈ ಯಾಗ ನಡೆಯುತ್ತಿದೆ. ಇಂದು ರಾತ್ರಿ ಯಾಗದ ಪೂರ್ಣಾಹುತಿ ನಡೆಯಲಿದೆ.ನಾಳೆ ಸಾರ್ವಜನಿಕರಿಗೆ ಯಾಗ ಸ್ಥಳ ಭೇಟಿಗೆ ಅವಕಾಶ ಸಿಗಲಿದೆ. ಅನ್ನಸಂತರ್ಪಣೆಯೂ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ರೀತಿ ದೇಶದ ಅನೇಕ ಭಾಗಗಳಲ್ಲಿ ಅಘೋರಿಗಳು ಯಾಗ ನಿರತರಾಗಿದ್ದಾರಂತೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ನಿಸ್ವಾರ್ಥಭಾವದಿಂದ ನಾಲ್ವರು ಅಘೋರಿಗಳು ಇಲ್ಲಿ ಯಾಗ ನಿರತರಾಗಿದ್ದಾರೆ. ಪ್ರಕೃತಿಯಲ್ಲಿ ದೊರಕುವ ಅಮೃತಬಳ್ಳಿ, ಗರಿಕೆ ಮುಂತಾದ ಸಸ್ಯ ಜೋತೆಗೆ ಲೀಟರ್ ಗಟ್ಟಲೆ ಶುದ್ಧ ತುಪ್ಪವನ್ನು ಯಾಗಕ್ಕೆ ಬಳಸಲಾಗುತ್ತಿದೆ.
ಚಂದ್ರಗ್ರಹಣ ಮುಗಿಯುತ್ತಿದ್ದಂತೆ ಆರಂಭವಾದ ಈ ಯಾಗ ನ. 17ರಂದು ಪೂರ್ಣಗೊಳ್ಳಲಿದೆ. ಹಿಮಾಲಯದಿಂದ ದಕ್ಷಿಣ ಭಾರತಕ್ಕೆ ಆಗಮಿಸಿದ ಆಘೋರಿಗಳು ಈ ಯಾಗವನ್ನು ಕೈಗೊಂಡಿದ್ದಾರೆ. ಖಂಡಗ್ರಸ್ತ ಸೂರ್ಯ ಗ್ರಹಣ, ರಕ್ತಚಂದನ ಚಂದ್ರಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ, ಅನಾವೃಷ್ಟಿ ಮುಂತಾದ ವಿಪತ್ತು ಸಂಭವಿಸದೆ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥಿಸಿ ಯಾಗ ನಡೆಸುತ್ತಿದ್ದೇವೆ ಎಂದಷ್ಟೇ ಯಾಗ ನಿರತ ಅಘೋರಿಗಳು ತಿಳಿಸಿದ್ದಾರೆ.
ಪ್ರತಿ ಒಂದೂವರೆ ಸಾವಿರ ನಾಗ ಸಾಧುಗಳಿಗೆ, ಓರ್ವ ಅಘೋರಿ ಮುಖ್ಯಸ್ಥನಾಗಿರುತ್ತಾರೆ. ಇಂತಹ ನಾಲ್ವರು ಅಘೋರಿಗಳು ಉಡುಪಿಯಲ್ಲಿ ಯಾಗ ನಿರತರಾಗಿದ್ದಾರೆ. ಯಾವುದೇ ಪ್ರಚಾರವಿಲ್ಲದೆ, ಅಪೇಕ್ಷೆ ಇಲ್ಲದೆ ನಡೆಸುವ ಯಾಗ ನಡೆಯುತ್ತಿದೆ.
