ಉಡುಪಿ ಸರ್ಕಾರಿ ಕಾಲೇಜ್ ಸ್ಕಾರ್ಫ್ ವಿವಾದ : ಈ ಅಭ್ಯಾಸವು ಅಶಿಸ್ತು ಮತ್ತು ಶಾಲೆ ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ : ಶಿಕ್ಷಣ ಸಚಿವ ಬಿ. ಸಿ. ನಾಗೇಶ್ – Vishwanews24
ಉಡುಪಿ ಸರ್ಕಾರಿ ಕಾಲೇಜ್ ಸ್ಕಾರ್ಫ್ ವಿವಾದ : ಈ ಅಭ್ಯಾಸವು ಅಶಿಸ್ತು ಮತ್ತು ಶಾಲೆ ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ : ಶಿಕ್ಷಣ ಸಚಿವ ಬಿ. ಸಿ. ನಾಗೇಶ್ – Vishwanews24
ಬೆಂಗಳೂರು : ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ತರಗತಿಯ ಸಮಯದಲ್ಲಿಯೂ ಸ್ಕಾರ್ಫ್ (ಹಿಜಾಬ್) ಧರಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇಡಲಾಗಿದೆ. ಕೆಲವು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಈ ಕುರಿತು ಬೇಡಿಕೆ ಇಟ್ಟು ಮೂರು ವಾರಗಳಿಂದ ತರಗತಿಯಿಂದ ಹೊರಗೆ ಉಳಿದಿದ್ದಾರೆ.
ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ ಕಾಲೇಜು ಗೇಟ್ ಬಳಿ ‘ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೆ ತೀರುತ್ತೇವೆ’ ಎಂಬ ಫಲಕಗಳೊಂದಿಗೆ ಪ್ರತಿಭಟನೆ ನಡೆಸಿದರು. ಈ ಬಳಿಕ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಈಗ ಶಿಕ್ಷಣ ಸಚಿವರು ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಶಿಕ್ಷಣ ಸಚಿವರ ಹೇಳಿಕೆ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು ಮಾತನಾಡಿದ್ದು, “ಈ ಅಭ್ಯಾಸವು ಅಶಿಸ್ತು ಆಗಿದೆ ಮತ್ತು ಶಾಲೆಗಳು ಮತ್ತು ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ” ಎಂದು ತಿಳಿಸಿದ್ದಾರೆ.
“ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಕೆಲವು ಜನರು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. 2023ರಲ್ಲಿ ಚುನಾವಣೆ ಹಿನ್ನಲೆಯಲ್ಲಿ ಅನಗತ್ಯವಾಗಿ ಗೊಂದಲ ಎಬ್ಬಿಸುತ್ತಿದ್ದಾರೆ. ವಿದ್ಯಾರ್ಥಿಗಳು ಈಗ ಸಾಂವಿಧಾನಿಕ ಹಕ್ಕುಗಳನ್ನು ಏಕೆ ಅಭ್ಯಾಸ ಮಾಡಲು ಬಯಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಆದರೆ ವಿದ್ಯಾರ್ಥಿಗಳು ನಾವು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಪ್ರಭಾವಿತರಾಗಿಲ್ಲ. ನಾವು ಅದರ ಭಾಗವಾಗಿಲ್ಲ. ನಮಗೆ ಸಕಾರಾತ್ಮಕವಾದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ನಾವು ಸಿಎಫ್‌ಐ ಸಂಪರ್ಕಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
“ಕಾಲೇಜಿನಲ್ಲಿ ದಾಖಲಾದ 100ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ಈ ವಿದ್ಯಾರ್ಥಿಗಳು ಮಾತ್ರ ವಸ್ತ್ರ ಸಂಹಿತೆ ಪಾಲಿಸಲು ಬಯಸುವುದಿಲ್ಲ. ಶಾಲೆಯು ಧರ್ಮವನ್ನು ಅಭ್ಯಾಸ ಮಾಡುವ ಸ್ಥಳವಲ್ಲ” ಎಂದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ. ವಿದ್ಯಾರ್ಥಿಗಳು ನಿಯಮವನ್ನು ಅನುಸರಿಸಿದ್ದರು. ಆದರೆ ಈಗ ಅವರಿಗೆ ಸಮಸ್ಯೆ ಆಗಿದೆ. ಈಗ ಸಾಂವಿಧಾನಿಕ ಹಕ್ಕುಗಳನ್ನು ಪಾಲಿಸಲು ಅವರು ಬಯಸುತ್ತಾರೆ. ಅಶಿಸ್ತು ಹಕ್ಕಾಗುವುದಿಲ್ಲ” ಎಂದು ಸಚಿವರು ತಿಳಿಸಿದ್ದಾರೆ.
