ಉಡುಪಿ: ಹೃದಯಾಘಾತದಿಂದ ಪತಿ ಸಾವು – ಪತ್ನಿ, ಮಗುವನ್ನು ಸ್ವೀಕರಿಸಲು ನಿರಾಕರಿಸಿದ ಕುಟುಂಬ ; ಸಖಿ ಕೇಂದ್ರದಲ್ಲಿ ಆಶ್ರಯ – Vishwanews24
ಉಡುಪಿ: ಹೃದಯಾಘಾತದಿಂದ ಪತಿ ಸಾವು – ಪತ್ನಿ, ಮಗುವನ್ನು ಸ್ವೀಕರಿಸಲು ನಿರಾಕರಿಸಿದ ಕುಟುಂಬ ; ಸಖಿ ಕೇಂದ್ರದಲ್ಲಿ ಆಶ್ರಯ
ಉಡುಪಿ: ನಗರದಲ್ಲಿ ಮೆಕ್ಯಾನಿಕ್ ಆಗಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಗುರುವಾರ ಸಾವನ್ನಪ್ಪಿದ್ದು, ಅವರ ಪತ್ನಿ ಮತ್ತು ಮಗುವನ್ನು ಮನೆಗೆ ಕರೆದೊಯ್ಯಲು ಪತಿ ಕುಟುಂಬ ನಿರಾಕರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬಳಿಕ ಇಬ್ಬರನ್ನೂ ಸಖಿ ಕೇಂದ್ರಕ್ಕೆ ಕಳುಹಿಸಿ ಆಶ್ರಯ ಒದಗಿಸಲಾಯಿತು.
ಬಾದಾಮಿ ಮೂಲದ ಅಯ್ಯಪ್ಪ (28) ಸಾವನ್ನಪ್ಪಿದವರು. ಮೃತ ವ್ಯಕ್ತಿಯ ಶವವನ್ನು ಕುಟುಂಬದವರು ಸ್ವೀಕರಿಸಿದ್ದು, ಆತನ ಪತ್ನಿ, ಮಗುವನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದರು. ಹೀಗಾಗಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ನೇತೃತ್ವದಲ್ಲಿ ಮಹಿಳೆ ಮತ್ತು 20 ದಿನಗಳ ಹಸುಗೂಸನ್ನು ನಿಟ್ಟೂರಿನ ಸಖಿ ಆಶ್ರಯ ಕೇಂದ್ರಕ್ಕೆ ಕಳುಹಿಸಲಾಯಿತು.

ಅಯ್ಯಪ್ಪ ಮತ್ತು ಗಂಗಾವತಿ ಮೂಲದ ಯುವತಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದು, ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳ ಒಪ್ಪಿಗೆ ಇರಲಿಲ್ಲ. ಇದೇ ಕಾರಣದಿಂದ ಅವರು ಮಹಿಳೆಯನ್ನು ಮನೆ ಸೇರಿಸಿಕೊಂಡಿಲ್ಲ ಎನ್ನಲಾಗಿದೆ.
