ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ
ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ ದೇಶಗಳಲ್ಲಿ ನಿಲ್ಲದ ಯುದ್ಧದ ಭೀತಿ ಜಿಲ್ಲೆಯ ಹೊಟೇಲ್ ಮಾಲಕರಿಗೆ ಮಾರಕವಾಗಿ ಎರಗಿದೆ. ಅದೇ ರೀತಿ ಹೊಟೇಲ್ನ್ನೇ ನಂಬಿರುವ ಸಾವಿರಾರು ಗ್ರಾಹಕರೂ ಈಗ ಹೊಟೇಲ್ ಮುಚ್ಚುವ ಭೀತಿಯಲ್ಲಿ ಆತಂಕವನ್ನು ವ್ಯಕ್ತಪಡಿಸುತಿದ್ದಾರೆ. ಇದು ಜಿಲ್ಲೆಯ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಯುದ್ಧದ ಭೀಕರತೆಯ ನಡುವೆ ಕಳೆದ ಸೋಮವಾರದಿಂದ (ಮಾ.9) ಹೊಟೇಲ್ಗಳಿಗೆ ಪ್ರತಿದಿನ ವಿತರಣೆ ಯಾಗುತಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್ ಸಪ್ಲೈ ನಿಂತ ಬಳಿಕ ಇಂದಿನವರೆಗೂ ಪುನರಾರಂಭಗೊಂಡಿಲ್ಲ. ಜಿಲ್ಲಾಡಳಿತವಾಗಲೀ, ಸರಕಾರವಾಗಲೀ ಅನಿಲ ಸಿಲಿಂಡರ್ ಪುನರಾರಂಭಗೊಳ್ಳುವ ಬಗ್ಗೆ ಯಾವುದೇ ಖಚಿತ ಭರವಸೆಯನ್ನು ನೀಡುತ್ತಿಲ್ಲ. ಇದರ ಪರಿಣಾಮ ಜಿಲ್ಲೆಯಾದ್ಯಂತ ಪ್ರತಿದಿನವೆಂಬಂತೆ ಹತ್ತಾರು ಹೊಟೇಲ್ಗಳು ಬಾಗಿಲು ಹಾಕುವ ವರದಿಗಳು ಬರುತ್ತಿವೆ.
ಇದನ್ನೂ ಓದಿ :
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24
‘ಜಿಲ್ಲೆಯಲ್ಲಿ ಹೊಟೇಲ್ಗಳು ಮುಚ್ಚುತ್ತಿರುವ ಬಗ್ಗೆ ನಮಗೂ ಮಾಹಿತಿ ಗಳು ಬರುತ್ತಿವೆ. ಆದರೆ ಖಚಿತವಾಗಿ ಗೊತ್ತಿಲ್ಲ. ಅದೇ ರೀತಿ ಮುಚ್ಚುವುದಾದರೆ ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಸಂಘದ ಮೇಲೆ ಹೆಚ್ಚುತ್ತಿದೆ. ಒಮ್ಮೆ ಬಾಗಿಲು ಮುಚ್ಚಿದರೆ ಮತ್ತೆ ತೆರೆಯಲು ಹಲವು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಸ್ವಲ್ಪ ದಿನ ಕಾದುನೋಡೋಣ ಎಂದು ಎಲ್ಲರಿಗೂ ಸಮಾಧಾನ, ಧೈರ್ಯ ಹೇಳುತಿದ್ದೇವೆ.’ ಎಂದು ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ನುಡಿದರು.
ಸಂಘದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದರೂ ಅವರಿಂದ ಖಚಿತ ಭರವಸೆ ಸಿಕ್ಕಿಲ್ಲ. ನೀವು ಅನಿಲಕ್ಕೆ ಪರ್ಯಾಯ ಉರುವಲು ಬಳಸಲು ಆದ್ಯತೆ ನೀಡಿ ಎಂದಿದ್ದಾರೆ. ಕಟ್ಟಿಗೆಯೂ ಬೇಕಾದಂತೆ ಸಿಗುತ್ತಿಲ್ಲ. ಬೇರೆ ಪರ್ಯಾಯಗಳೂ ಸುಲಭದಲ್ಲಿ ಕೈಗಟಕುತ್ತಿಲ್ಲ. ಅಸಹಾಯಕರಾದವರು ಈಗಾಗಲೇ ಬಾಗಿಲು ಮುಚ್ಚಿದ್ದಾರೆ ಎಂದರು.
ಹೊಟೇಲ್ ಬಂದ್ ಮಾಡುವುದು ಸಹ ಹೇಳಿದಷ್ಟು ಸುಲಭವಲ್ಲ. ಒಮ್ಮೆ ಹೊಟೇಲ್ ಮುಚ್ಚಿದರೆ, ಸಿಬ್ಬಂದಿಗಳನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯೂ ಎದುರಾಗುತ್ತದೆ. ಈಗಾಗಲೇ ತಿಂಡಿ, ಊಟದ ವೈವಿಧ್ಯತೆಯಲ್ಲಿ ಸಾಕಷ್ಟು ಕಡಿತ ಮಾಡಲಾಗಿದೆ. ದೋಸೆಯನ್ನು ನಿಲ್ಲಿಸಿಬಿಟ್ಟಿದ್ದೇವೆ. ದೊಡ್ಡ ದೊಡ್ಡ ಹೊಟೇಲ್ಗಳು ಇದರ ಬಿಸಿ ಅನುಭವಿಸುತ್ತಿವೆ ಎಂದು ತಲ್ಲೂರು ಶಿವರಾಮ ಶೆಟ್ಟಿ ನುಡಿದರು.
ಇದನ್ನೂ ಓದಿ:
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24
ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲೂ ವಾಣಿಜ್ಯ ಬಳಕೆ ಅಡುಗೆ ಅನಿಲ ಅಭಾವದಿಂದಾಗಿ ಹೋಟೆಲ್ ಉದ್ಯಮಕ್ಕೆ ಬಾರೀ ಹೊಡೆತ ಬಿದ್ದಿದೆ. ಗ್ಯಾಸ್ ಮೂಲಕವೇ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿದ್ದ ಸಣ್ಣ-ಪುಟ್ಟ ಹೋಟೆಲ್, ಕ್ಯಾಂಟಿನ್ಗಳು ಒಂದಷ್ಟು ಮುಚ್ಚಿದ ಬಗ್ಗೆ ವರದಿಯಾಗಿದೆ. ಇನ್ನು ಕೆಲ ಪ್ರಸಿದ್ದ ಸಸ್ಯಾಹಾರಿ ಹೋಟೆಲ್ ಗಳಲ್ಲಿ ಮೆನು ಬದಲಾವಣೆ ಮಾಡಲಾಗಿದ್ದು ದೋಸೆ ಮೊದಲಾದ ತಿಂಡಿ-ತಿನಿಸುಗಳು ಗ್ರಾಹಕರಿಗೆ ಅಲಭ್ಯವಾಗಿದೆ.
ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನಲ್ಲಿರುವ ಹೋಟೆಲ್ ಮಹಾಲಕ್ಷ್ಮೀಯಲ್ಲಿ ಎಲ್ಪಿಜಿ ಅಭಾವ ಕಂಡುಬಂದಿದ್ದು ಹಿಂಬಂದಿಯ ಜಾಗದಲ್ಲಿ ಸೌದೆ ಒಲೆ ನಿರ್ಮಿಸಲಾಗಿದೆ. ಎಲ್ಲಾ ಸಮಯದಲ್ಲಿ ದೋಸೆ ಮೊದಲಾದ ಕೆಲ ಆಹಾರಖಾದ್ಯ ದೊರಕು ತ್ತಿಲ್ಲ. ಆದಷ್ಟು ಗ್ರಾಹಕರಿಗೆ ಸೇವೆ ನೀಡಲು ಬದ್ಧರಾಗಿದ್ದೇವೆ. ಬೆಂಕಿ ರಹಿತವಾಗಿ ತಯಾರಿಸಬಹುದಾದ ಆಹಾರ ಖಾದ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸೀಸನ್ ಸಮಯದಲ್ಲಿ ಹೀಗಾಗಿದ್ದು ಹೋಟೆಲ್ ಕೊಠಡಿ ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರು ಎಲ್ಪಿಜಿ ಲಭ್ಯತೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಮಹಾಲಕ್ಷ್ಮೀ ಹೋಟೆಲ್ ಜನರಲ್ ಮ್ಯಾನೇಜರ್ ಮಧುಸೂಧನ್ ’ ತಿಳಿಸಿದ್ದಾರೆ.
ಇದನ್ನೂ ಓದಿ :
ಕುಂದಾಪುರದ ಪ್ರಸಿದ್ಧ ಪಾರಿಜಾತ ಹೋಟೆಲ್ನಲ್ಲಿ ಕೆಲವು ದಿನಗಳಿಂದ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲಾ ಗುತ್ತಿದ್ದು, ಗ್ರಾಹಕರಿಗೆ ಅಗತ್ಯ ತಿನಿಸುಗಳನ್ನು ಪೂರೈಸಲಾಗುತ್ತಿದೆ. ಕೋಟದ ಪ್ರಸಿದ್ಧ ಲತಾ ಹೋಟೆಲ್ನಲ್ಲಿ ಬೆಳಿಗ್ಗೆ ಮೆನು ಬದಲಾವಣೆಯಾಗಿದ್ದು ಇಲ್ಲಿನ ಸ್ಪೆಷಲ್ ದೋಸೆಗಳು ಸಿಗೋದಿಲ್ಲ.
ಇನ್ನು ಅನೇಕ ಮಾಂಸಾಹಾರಿ ಹೋಟೆಲ್ಗಳನ್ನು ಸಹ ಮುಚ್ಚಲಾಗಿದೆ. ಕೆಲವು ಬಾರ್-ರೆಸ್ಟೋರೆಂಟ್ಗಳಲ್ಲಿ ಸೌದೆ ಒಲೆ ಬಳಕೆ ಮಾಡುತ್ತಿದ್ದು ಹಲವೆಡೆ ಮೀನು ಖಾದ್ಯಗಳು ದೊರೆಯುತ್ತಿಲ್ಲ, ಬದಲಾಗಿ ಬಿರಿಯಾನಿ ಮೊದಲಾದ ಖಾದ್ಯಗಳಷ್ಟೇ ಲಭಿಸುತ್ತಿದೆ. ಬಹಳಷ್ಟು ಕಡೆ ಬಾಯಿ ರುಚಿಗೆ ತಕ್ಕ ಸಸ್ಯಹಾರಿ, ಮಾಂಸಹಾರಿ ಖಾದ್ಯಗಳು ಭೋಜನ ಪ್ರಿಯರಿಗೆ ಸಿಗುತ್ತಿಲ್ಲ ಎಂದು ಎರಡು ಹೊತ್ತಿನ ಊಟಕ್ಕೆ ಹೊಟೇಲ್ನ್ನೇ ಆಶ್ರಯಿಸಿರುವ ಕೆಲವು ಗ್ರಾಹಕರು ದೂರುತಿದ್ದಾರೆ.
“ಈಗಾಗಲೇ ಕುಂದಾಪುರದಲ್ಲಿರುವ 2 ಹೋಟೆಲ್ ಪೈಕಿ ಮಾಂಸಹಾರಿ ಹೋಟೆಲ್ ಮುಚ್ಚಿದ್ದೇವೆ. ಸಸ್ಯಾಹಾರಿ ಹೋಟೆಲ್ನಲ್ಲಿ ಮಿತ ಆಹಾರ ಮಾತ್ರವೇ ಸಿದ್ಧಪಡಿಸಿ ನೀಡಲಾಗುತ್ತಿದೆ. ಕೊಲ್ಲೂರಿನ ಹೋಟೆಲ್ನಲ್ಲಿ ನಿರ್ದಿಷ್ಟ ಆಹಾರ ಖಾದ್ಯಗಳನ್ನು ಕೆಲ ದಿನಗಳಿಂದ ಸೌದೆ ಒಲೆಯಲ್ಲಿ ತಯಾರಿಸಲಾಗುತ್ತಿದೆ. ಅನಿಲ ಸಮಸ್ಯೆ ಹೀಗೆಯೇ ಮುಂದುವರಿದರೆ ವ್ಯವಹಾರಕ್ಕೆ ಬಾರೀ ಹೊಡೆತ ಉಂಟಾಗ ಲಿದೆ. ಹೋಟೆಲ್ ಮುಚ್ಚುವುದು ದೊಡ್ಡ ವಿಚಾರವಲ್ಲ. ಒಂದೆಡೆ ಸಂಸ್ಥೆಯಿಂದ ಗ್ರಾಹಕರು ದೂರಾಗುತ್ತಾರೆ. ಮತ್ತೊಂದೆಡೆ ಉದ್ಯೋಗ ನೀಡದಿದ್ದರೆ ಸಿಬ್ಬಂದಿ-ನೌಕರರು ತೆರಳಿದಲ್ಲಿ ವಾಪಾಸ್ ಕರೆತರುವುದು ಮತ್ತೊಂದು ಸವಾಲು”.
-ವಿಕ್ರಮ್ ಜಿ.ಡಿ., ಆಡಳಿತ ನಿರ್ದೇಶಕರು, ಮಹಾಲಕ್ಷ್ಮೀ ಗ್ರೂಫ್ ಆಫ್ ಹೋಟೆಲ್ಸ್ ಕೊಲ್ಲೂರು ಮತ್ತು ಕುಂದಾಪುರ.
‘ಇನ್ನು ಒಂದೆರಡು ದಿನ ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲೆಯಲ್ಲಿ ಮತ್ತೆ 25-30ವರ್ಷ ಹಿಂದಿನ ಸ್ಥಿತಿಗೆ ಮರಳಬೇಕಾಗುತ್ತದೆ. ಬೆಳಗ್ಗೆ ತಿಂಡಿಗಳನ್ನು ತಯಾರಿಸಿ ಶೋಕೇಸ್ನಲ್ಲಿಟ್ಟು ಗ್ರಾಹಕರು ಬಂದಂತೆ ಅಲ್ಲಿನ ತಿಂಡಿಯನ್ನು ತೆಗೆದು ನೀಡಬೇಕಾಗುತ್ತದೆ. ಬಿಸಿಬಿಸಿ ತಿಂಡಿ ತಿನ್ನುವ ಆಸೆಗೆ ಗ್ರಾಹಕರು ಎಳ್ಳುನೀರು ಬಿಡಬೇಕಾಗುತ್ತದೆ.’
-ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷರು.
ಇದನ್ನೂ ಓದಿ :
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24
