ಎರಡು ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ -Vishwanews24
ಹೊಸದಿಲ್ಲಿ,: ಬ್ಯಾಂಕ್ಗಳ ವಿಲೀನ ವೇತನ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರೆ ನೀಡಲಾಗಿದ್ದ 48 ಗಂಟೆಗಳ ಬ್ಯಾಂಕ್ ನೌಕರರ ಮುಷ್ಕರವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರಕಾರದ ಬ್ಯಾಂಕ್ ವಿಲೀನ ಘೋಷಣೆಗೆ ಸಂಬಂಧಿಸಿದ ತಮ್ಮ ಕಳವಳ ಬಗೆಹರಿಸಲು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳ ಅಧಿಕಾರಿಗಳ ಸಂಘಟನೆಗಳು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ನೀಡಿದ್ದ ಮುಷ್ಕರದ ಕರೆಯನ್ನು ಮುಂದೂಡಿವೆ.
ಹೊಸದಿಲ್ಲಿಯಲ್ಲಿ ರಾಜೀವ್ ಕುಮಾರ್ ಅವರನ್ನು ಭೇಟಿಯಾಗಿರುವ ನಾಲ್ಕು ಬ್ಯಾಂಕ್ ಯೂನಿಯನ್ಗಳ ಸಂಘಟನೆಗಳ ಪ್ರತಿನಿಧಿಗಳು ಮುಷ್ಕರ ಹಿಂಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ.
”ಹಣಕಾಸು ಕಾರ್ಯದರ್ಶಿಯ ಸಕಾರಾತ್ಮಕ ಹಾಗೂ ಕಾರ್ಯ ಸಾಧುವಾದ ಪರಿಹಾರವನ್ನು ಪರಿಗಣನೆಗೆ ತೆಗೆದುಕೊಂಡು 48 ಗಂಟೆಗಳ ಕಾಲ ಕರೆ ನೀಡಿದ್ದ ಮುಷ್ಕರವನ್ನು ಮುಂದೂಡಲು ನಿರ್ಧರಿಸಲಾಗಿದೆ” ಎಂದು ನಾಲ್ಕು ಬ್ಯಾಂಕ್ ಯೂನಿಯನ್ಗಳು ತಿಳಿಸಿವೆ.
ಎಲ್ಲ ಬ್ಯಾಂಕ್ಗಳ ಗುರುತನ್ನು ಕಾಪಾಡುವುದು ಸೇರಿದಂತೆ ಉದ್ದೇಶಿತ 10 ಬ್ಯಾಂಕ್ಗಳ ವಿಲೀನದಿಂದಾಗಿ ಉಂಟಾಗುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡ ಸಮಿತಿಯನ್ನು ರಚಿಸುವ ಕುರಿತಂತೆ ರಾಜೀವ್ ಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ .ಚರ್ಚೆಗಳ ದೃಷ್ಟಿಯಿಂದ ಬ್ಯಾಂಕ್ಗಳ ಮುಷ್ಕರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಲಾಗಿದೆ.
