ಏರ್ ಇಂಡಿಯಾ ವಿಮಾನದ ಎಲ್ಲಾ ಪೈಲಟ್ಗಳಿಗೆ ಮಾದಕ ದ್ರವ್ಯ ಪರೀಕ್ಷೆ ಕಡ್ಡಾಯ – vishwanews24
ಏರ್ ಇಂಡಿಯಾ ವಿಮಾನದ ಎಲ್ಲಾ ಪೈಲಟ್ಗಳಿಗೆ ಮಾದಕ ದ್ರವ್ಯ ಪರೀಕ್ಷೆ ಕಡ್ಡಾಯ
ನವದೆಹಲಿ: ಆಕಾಶದಲ್ಲಿ ಹಾರಾಡುವಾಗಲೇ ತೀವ್ರ ಗಾಳಿಯ ಅಡಚಣೆಗೆ (ಟರ್ಬುಲೆನ್ಸ್) ಒಳಗಾಗಿದ್ದ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ಡ್ರಗ್ಸ್ ಸೇವಿಸಿ ವಿಮಾನ ಹಾರಿಸುತ್ತಿದ್ದರು ಎಂಬ ವಿಚಾರ ಹೊರ ಬಿದ್ದ ಬೆನ್ನಲ್ಲೇ ಇದೀಗ ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.
ಪ್ರಯಾಣಿಕರ ಭದ್ರತೆ ಮತ್ತು ವೈಮಾನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಏರ್ ಇಂಡಿಯಾ ಆಡಳಿತ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಎರಡೂ ಸಂಸ್ಥೆಗಳು ತಮ್ಮ ಪೈಲಟ್ಗಳಿಗೆ ಆಂತರಿಕ ಸಂದೇಶ ರವಾನಿಸಿದ್ದು, ವಿಮಾನಯಾನ ರಂಗದ ಪ್ರಸ್ತುತ ನಿಯಮಾವಳಿಗಳ ಅಡಿಯಲ್ಲಿ ಅನುಮತಿಸದ ಯಾವುದೇ ಮಾದಕ ವಸ್ತುಗಳು ಅಥವಾ ಔಷಧಗಳ ಸೇವನೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿವೆ. ಈ ಪರೀಕ್ಷೆಗಳು ಕಡ್ಡಾಯವಾಗಿದ್ದು, ಆಗಸ್ಟ್ 13ರಿಂದ ಆರಂಭವಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನಯಾನ ಸಚಿವಾಲಯದ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಪ್ರತಿ ವರ್ಷ ತಮ್ಮ ಒಟ್ಟು ವಿಮಾನ ಸಿಬ್ಬಂದಿಯಲ್ಲಿ ಕನಿಷ್ಠ ಶೇ. 10ರಷ್ಟು ಸಿಬ್ಬಂದಿಗೆ ಸೈಕೋಆಕ್ಟಿವ್ ಮಾದಕದ್ರವ್ಯ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ವಿಮಾನಯಾನ ಕ್ಷೇತ್ರದ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಮತ್ತು ಇತರ ಪಾಲುದಾರರಲ್ಲಿ ವಿಶ್ವಾಸ ಮೂಡಿಸಲು ಈ ನಿರ್ಧಾರ ಅಗತ್ಯವಾಗಿತ್ತು ಎಂದು ಏರ್ ಇಂಡಿಯಾ ಹೇಳಿದೆ.
ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ A320neo ವಿಮಾನ ಹಾರಾಟದ ಮಧ್ಯದಲ್ಲಿಯೇ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಎತ್ತರದಿಂದ ಕೆಳಕ್ಕೆ ಕುಸಿದಿತ್ತು. ಈ ವಿಮಾನದ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ, ಏರ್ ಇಂಡಿಯಾ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.
ಬಂಟ್ವಾಳ : ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ವಿದ್ಯಾರ್ಥಿಗೆ ಸಿಎಂ ಮೆಚ್ಚುಗೆ – vishwanews24
