ಕಗ್ಗಾಂಟಾದ ಅತೃಪ್ತರು ಬಿಜೆಪಿ ಸಂಪರ್ಕದಲ್ಲಿ – ಸಿಎಂ ಆಗುವುದಕ್ಕೆ ಬಿಎಸ್ವೈ ಸಿದ್ದತೆ…!!
ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಅಕಾಂಕ್ಷಿಗಳು ಹೆಚ್ಚಾಗಿರುವ ಕಾರಣದಿಂದಾಗಿ ಅತೃಪ್ತರನ್ನು ಸಮಾಧಾನ ಮಾಡುವುದೇ ಕಗ್ಗಾಂಟಾಗಿ ಹೋಗಿದೆ.
ಈ ಮಧ್ಯೆ ಈ ಗೊಂದಲಮಯ ವಾತಾವರಣದಲ್ಲಿ ಸರ್ಕಾರ ಹೆಚ್ಚು ದಿನ ಇರಲಾರದು ಎಂದು ಭಾವಿಸಿರುವ ಕೆಲವು ಮುಖಂಡರು ಈಗಾಗಲೇ ಬಿಜೆಪಿ ಸಂಪರ್ಕದಲ್ಲಿ ಇದ್ದು ಅತಂತ್ರ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವ ಬದಲು ಬಿಜೆಪಿಗೆ ಹೋಗುವುದೇ ಒಳ್ಳೆಯದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಪ್ರಯತ್ನ ಮಾಡಿದರೆ ಸರ್ಕಾರ ರಚಿಸುವುದು ಕಷ್ಟವೇನಲ್ಲ. ಆದರೆ ಬಿಜೆಪಿಯ ಆಪರೇಷನ್ ಕಮಲಕ್ಕೆ ಕೈ ಹಾಕದೆ ಮೌನಕ್ಕೆ ಶರಣಾಗಿದೆ. ಅವರಾಗಿ ಬರಲಿ ಎಂಬುದು ಬಿಜೆಪಿಯ ಮೌನಕ್ಕೆ ಕಾರಣವಿರಬಹುದು. ಬಿಜೆಪಿಯ ನಡಿಗೆಯು ನಿಗೂಢವಾಗಿದೆ.
ಅಧಿಕಾರಕ್ಕಾಗಿ ಕಿತ್ತಾಡಿಕೊಂಡು ಸರ್ಕಾರ ಮಾಡುವುದನ್ನು ಜನರೇ ನೋಡಿ ರೋಸಿ ಹೋಗುತ್ತಾರೆ ಹಾಗೆ ಆದರೆ ಬಿಜೆಪಿಗೇ ಲಾಭ ಎನ್ನುವುದನ್ನು ಅರ್ಥಮಾಡಿಕೊಂಡಿರುವ ಬಿಜೆಪಿ ಹೈ ಕಮಾಂಡ್ ಯಾವುದೇ ಕಾರಣಕ್ಕೂ ತಾವಾಗಿಯೇ ಬರುವವರೆವಿಗೂ ಯಾರನ್ನು ಆಪರೇಷನ್ ಮಾಡದಂತೆ ಎಚ್ಚರಿಕೆ ನೀಡಿದೆ.
ಒಂದೊಮ್ಮೆ ಯಾರಿಗೂ ಬಹುಮತ ಬಂದಿಲ್ಲ ಎಂದು ವಿಧಾನಸಭೆಯನ್ನು ವಿಸರ್ಜನೆ ಮಾಡಿದರೂ ಕೂಡ ಈ ಬಾರಿ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಮತ್ತೆ ಅಧಿಕಾರಕ್ಕೆ ಬಿಜೆಪಿಯೇ ಬರಲಿದೆ ಎನ್ನುವ ಲೆಕ್ಕಚಾರವಿರುವ ಕಾರಣದಿಂದಾಗಿ ಬಿಜೆಪಿ ಕಾಂಗ್ರಸ್ ಮತ್ತು ಜೆಡಿಎಸ್ ನಾಯಕರ ಕಿತ್ತಾಟನ್ನ ಮನರಂಜನೆಯಾಗಿ ವೀಕ್ಷಿಸುತ್ತಿದೆ.
ಕೆಲವೇ ದಿನಗಳಲ್ಲಿ ಅತೃಪ್ತರು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ಕಂಟಕವಾಗಲಿದ್ದು ಆಗ ಬಿಜೆಪಿಗೆ ಬರುವ ಶಾಸಕರನ್ನುಟ್ಟುಕೊಂಡು ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡುವುದಕ್ಕೆ ಬಿಜೆಪಿ ಚಿಂತನೆ ನಡೆಸಿದ್ದು, ಬಿಎಸ್ವೈ ಮತ್ತೆ ಮುಖ್ಯಮಂತ್ರಿಯಾಗುವ ಖುಷಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳ ಮಾತಾಗಿದೆ.
